ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಹಿಂದು ಯುವಕ ದೀಪು ಚಂದ್ರ ದಾಸ್ ಅವರ ಕ್ರೂರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಗುರುವಾರ ಪ್ರಮುಖ ಆರೋಪಿ ಯಾಸಿನ್ ಅರಾಫತ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರಾದವರ ಒಟ್ಟು ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಡಿಸೆಂಬರ್ 18 ರಂದು ಮೈಮೆನ್ಸಿಂಗ್ ಜಿಲ್ಲೆಯ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ದೀಪು ಚಂದ್ರ ದಾಸ್ ಅವರನ್ನು ರಾಜೀನಾಮೆ ನೀಡುವಂತೆ ಅಲ್ಲಿನ ಮೇಲ್ವಿಚಾರಕರು ಒತ್ತಾಯಿಸಿದ್ದರು. ವಾಗ್ವಾದದ ನಂತರ, ದಾಸ್ ಅವರನ್ನು ಕೆಲಸದ ಸ್ಥಳದಿಂದ ಎಳೆದುಕೊಂಡು ಹೋಗಿ ಉದ್ರಿಕ್ತ ಗುಂಪಿಗೆ ಒಪ್ಪಿಸಲಾಗಿತ್ತು.
ತನಿಖಾಧಿಕಾರಿಗಳ ಪ್ರಕಾರ, ಬಂಧಿತ ಆರೋಪಿ ಯಾಸಿನ್ ಅರಾಫತ್ ಸ್ಥಳೀಯವಾಗಿ ಜನರನ್ನು ಪ್ರಚೋದಿಸಿ ಗುಂಪು ದಾಳಿಗೆ ಸಂಚು ರೂಪಿಸಿದ್ದ. ಆರೋಪಿಗಳ ತಂಡ ದೀಪು ಅವರನ್ನು ಮನಬಂದಂತೆ ಥಳಿಸಿ, ನಂತರ ಮರಕ್ಕೆ ನೇತುಹಾಕಿ ಸಜೀವ ದಹನ ಮಾಡಿತ್ತು. ಈ ಅಮಾನವೀಯ ಕೃತ್ಯದ ನಂತರ ಅರಾಫತ್ ತಲೆಮರೆಸಿಕೊಂಡಿದ್ದ.
ಈ ಭೀಕರ ಹತ್ಯೆಯು ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಸುರಕ್ಷತೆಯ ಬಗ್ಗೆ ದೊಡ್ಡ ಮಟ್ಟದ ಪ್ರಶ್ನೆಗಳನ್ನು ಎತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಘಟನೆಗೆ ತೀವ್ರ ಖಂಡನೆ ವ್ಯಕ್ತವಾಗಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂಬ ಒತ್ತಾಯ ಕೇಳಿಬಂದಿದೆ.
ಸದ್ಯ ಪೊಲೀಸರು ಬಂಧಿತ ಆರೋಪಿಗಳನ್ನು ವಿಚಾರಣೆಗೊಳಪಡಿಸಿದ್ದು, ಹತ್ಯೆಯಲ್ಲಿ ಭಾಗಿಯಾದ ಇತರರಿಗಾಗಿ ಶೋಧ ಮುಂದುವರಿಸಿದ್ದಾರೆ.

