ಹೊಸದಿಗಂತ ವರದಿ,ಮಡಿಕೇರಿ:
ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿ, ವನೃಮೃಗಗಳನ್ನು ಬೇಟೆಯಾಡಿ ಮಾಂಸ ಮಾರಾಟಕ್ಕೆ ಯತ್ನಿಸುತಿದ್ದ ಇಬ್ಬರನ್ನು ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳು ಬಂಧಿಸಿ ಕಾರು ಸಹಿತ ಮಾಲು ವಶಪಡಿಸಿಕೊಂಡಿದ್ದಾರೆ.
ವೀರಾಜಪೇಟೆ ಸಮೀಪದ ಬೇಟೋಳಿ ಗ್ರಾಮದ ನಿವಾಸಿ ಬೇಕರಿ ಮಾಲಕ ಎಂ.ಎಂ.ಅಜೀಜ್ ಅಲಿಯಾಸ್ ಆಜಿ (45), ವೀರಾಜಪೇಟೆ ನಗರದ ನೆಹರುನಗರದ ನಿವಾಸಿ ಆಟೋ ಚಾಲಕ ಹುಸೈನ್ ಸಿ.ಎ. ಅಲಿಯಾಸ್ ಜಂಶೀರ್ (32) ಬಂಧಿತ ಆರೋಪಿಗಳಾಗಿದ್ದು, ಚಾಮಿಯಾಲ ಮೈತಾಡಿ ಗ್ರಾಮದ ನಿವಾಸಿ ಆಜೀಜ್ ಅಲಿಯಾಸ್ ಆಜ್ಜು, ಬೇಟೋಳಿ ಗುಂಡಿಗೆರೆ ಗ್ರಾಮದ ನಿವಾಸಿ ಆಶ್ರಫ್ ಆಲಿಯಾಸ್ ಆಚ್ಚು ಮತ್ತು ಶಿಯಾಬ್ ಪ್ರಕರಣದಲ್ಲಿ ಭಾಗಿಯಾಗಿದ್ದರೆನ್ನಲಾಗಿದ್ದು, ಇವರುಗಳು ಪರಾರಿಯಾಗಿದ್ದಾರೆ.
ಘಟನೆಯ ವಿವರ: ಆರೋಪಿಗಳು ಸಂಚು ರೂಪಿಸಿ ಹೆಗ್ಗಳ ಗ್ರಾಮ ಅರಣ್ಯ ಪ್ರದೇಶಕ್ಕೆ ತೆರಳಿ ಅಕ್ರಮವಾಗಿ ಎರಡು ಜಿಂಕೆಗಳನ್ನು ಗುಂಡಿಕ್ಕಿ ಕೊಂದು ಮಾಂಸವನ್ನಾಗಿಸಿ ಹಂಚಿಕೊಂಡಿದ್ದಲ್ಲದೆ, ಉಳಿದ ಮಾಂಸವನ್ನು ಮಾರಾಟ ಮಾಡುವ ಯುತ್ನದಲ್ಲಿದ್ದರು ಎನ್ನಲಾಗಿದೆ.
ಬೇಟೆಯಿಂದ ದೊರೆತ ಮಾಂಸದ ಜೊತೆಗೆ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಇನ್ನೋವ ಕಾರಿನಲ್ಲಿ ಪೆರುಂಬಾಡಿ ಗ್ರಾಮದ ಮೂಲಕ ಬಿಟ್ಟಂಗಾಲ ಮಾರ್ಗವಾಗಿ ಬರುತ್ತಿರುವುದಾಗಿ ವೀರಾಜಪೇಟೆ ಅರಣ್ಯ ಸಂಚಾರಿ ದಳದ ಸಿಬ್ಬಂದಿಗಳಿಗೆ ಮಾಹಿತಿ ಲಭಿಸಿತ್ತು.
ಮಾಹಿತಿ ಅನ್ವಯ ಸಂಚಾರಿ ದಳದ ಸಿಬ್ಬಂದಿಗಳು ಎಲ್ಲಾ ವಾಹನಗಳನ್ನು ತಪಾಸಣೆಗೆ ಒಳಪಡಿಸುತ್ತಿದ್ದ ಸಂದರ್ಭ ಆ ಮಾರ್ಗವಾಗಿ ಬರುತ್ತಿದ್ದ ಇನ್ನೋವ ಕಾರನ್ನು ಆರೋಪಿಗಳಿಗೆ ಸಂದೇಹ ಬಾರದಂತೆ ಎಲ್ಲಾ ವಾಹನಗಳನ್ನು ತಪಾಸಣೆ ಮಾಡುವಂತೆಯೇ ತಪಾಸಣೆಗೆ ಒಳಪಡಿಸಿದಾಗ ವಾಹನದ ಹಿಂಬದಿಯಲ್ಲಿ ಚೀಲದಲ್ಲಿರಿಸಲಾದ ಜಿಂಕೆಯ ಎರಡು ತಲೆ, ಸೇರಿದಂತೆ ಸುಮಾರು 44 ಕೆ.ಜಿ ಹಸಿ ಮಾಂಸ ಪತ್ತೆಯಾಗಿದೆ.
ಬೇಟೆಯಾಡಿದ ಮಾಂಸದೊಂದಿಗೆ ಒಂದು ಒಂಟಿ ನಳಿಕೆಯ ಕೋವಿ, ಎರಡು ಕಬ್ಬಿಣದ ಕತ್ತಿ, ಮೂರು ಚೂರಿಗಳು ಪತ್ತೆಯಾಗಿದ್ದು, ವಶಕ್ಕೆ ಪಡೆದಿರುವ ವಸ್ತುಗಳೊಂದಿಗೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.