ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ವಿರುದ್ಧ ಯುದ್ಧ ಮಾಡುವುದರಿಂದ ಪಾಕಿಸ್ತಾನಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದು ಪಾಕಿಸ್ತಾನದಲ್ಲಿ ಕೇಂದ್ರ ಗುಪ್ತಚರ ಸಂಸ್ಥೆ(CIA)ಯ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ನೇತೃತ್ವ ವಹಿಸಿದ್ದ ಮಾಜಿ ಅಧಿಕಾರಿ ಜಾನ್ ಕಿರಿಯಾಕೌ ಹೇಳಿದ್ದಾರೆ.
ಎಎನ್‌ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಕಿರಿಯಾಕೌ, ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದು, ಭಾರತದೊಂದಿಗೆ ಯುದ್ಧ ಮಾಡಲು ನಿರ್ಧರಿಸಿದರೆ ಸೋಲು ನಿಶ್ಚಿತ ಎಂದಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದಿಂದ ಏನೂ ಒಳ್ಳೆಯದಾಗುವುದಿಲ್ಲ, ಏಕೆಂದರೆ ಪಾಕಿಸ್ತಾನಿಗಳು ಸೋಲುತ್ತಾರೆ. ಇಲ್ಲಿ ವಿಷಯ ಸರಳವಾಗಿದೆ ಎಂದು ಹೇಳಿದರು.
ಪಾಕಿಸ್ತಾನವು ಭಾರತೀಯರನ್ನು ಪ್ರಚೋದಿಸುವುದನ್ನು ನಿಲ್ಲಿಸಿ. ನಾನು ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ಮಾತನಾಡುತ್ತಿಲ್ಲ. ನಾನು ಸಾಂಪ್ರದಾಯಿಕ ಯುದ್ಧದ ಬಗ್ಗೆ ಮಾತನಾಡುತ್ತಿದ್ದೇನೆ. ಆದ್ದರಿಂದ ಭಾರತೀಯರನ್ನು ನಿರಂತರವಾಗಿ ಪ್ರಚೋದಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು.
2016ರಲ್ಲಿ ಸರ್ಜಿಕಲ್ ಸ್ಟ್ರೈಕ್, 2019ರಲ್ಲಿ ಬಾಲಕೋಟ್ ದಾಳಿ ಹಾಗೂ ಪ್ರಸ್ತುತ ವರ್ಷ ಅಂದರೆ 2025ರಲ್ಲಿ ಭಾರತದ ಪಹಲ್ಗಾಮ್ಗೆ ದಾಳಿ ಮಾಡಿ ಅಮಾಯಕ ನಾಗರಿಕರನ್ನು ಹತ್ಯೆ ಮಾಡಿ, ನಂತರ ಆಪರೇಷನ್ ಸಿಂಧೂರದ ಸೇರಿದಂತೆ ಹಲವು ವರ್ಷಗಳಿಂದ ಗಡಿಯಾಚೆಯಿಂದ ಭಯೋತ್ಪಾದಕರು ನಡೆಸಿದ ದಾಳಿಗಳಿಂದ ಭಾರತ ಹಿಂದೆ ಸರಿದಿಲ್ಲ, ಅದಕ್ಕೆ ತಕ್ಕ ಉತ್ತರವನ್ನು ನೀಡಿದೆ ಎಂದು ಹೇಳಿದ್ದಾರೆ.
ಈ ಎಲ್ಲ ದಾಳಿಗಳಿಂದ ವಿಫಲವಾದ ನಂತರ ಪಾಕಿಸ್ತಾನ ಕೊನೆಗೆ ಕದನ ವಿರಾಮದ ದಾರಿಯಲ್ಲಿ ಸಾಗುತ್ತದೆ. ಭಾರತವನ್ನು ವಿರೋಧಿಸುವ ಹಾಗೂ ಅವರ ವಿರುದ್ಧ ಯುದ್ಧ ಮಾಡುವ ತಾಕತ್ತು ಪಾಕಿಸ್ತಾನಕ್ಕೆ ಇಲ್ಲ. ಭಾರತದಂತಹ ಮಿಲಿಟರಿ ಪವರ್ ಪಾಕಿಸ್ತಾನ ಹೊಂದಿಲ್ಲ. ಪಾಕಿಸ್ತಾನ ಪ್ರತಿ ಬಾರಿ ಭಾರತಕ್ಕೆ ಪರಮಾಣು ಬೆದರಿಕೆಯನ್ನು ಹಾಕಿಕೊಂಡು ಬಂದಿದೆ, ಆದರೆ ಭಾರತ ಈ ಬೆದರಿಕೆಗೆ ಯಾವತ್ತೂ ಭಯಪಟ್ಟಿಲ್ಲ, ಹಾಗೂ ಪಾಕ್ ಮಾತನ್ನು ಲೆಕ್ಕಕ್ಕೂ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ.

