ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧತೆ ನಡೆಸಿರುವ ನರೇಂದ್ರ ಮೋದಿ ಅವರು ಅವರ ಎರಡನೇ ಅವಧಿಯ ಕೊನೆಯ ಸಂಪುಟ ಸಭೆಯನ್ನು ಬುಧವಾರ ನಡೆಸಿದರು.
ಈ ವೇಳೆಸಂಪುಟ ಸಚಿವರನ್ನು ಉದ್ದೇಶಿಸಿ ಮಾತನಾಡಿದ ಅವರು, ಸೋಲು ಮತ್ತು ಗೆಲುವುಗಳು ರಾಜಕೀಯದ ಒಂದು ಭಾಗವಷ್ಟೇ ಎಂದು ಹೇಳಿದರು.
ನಾವು ಕಳೆದ 10 ವರ್ಷಗಳಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದ್ದೇವೆ. ಅದನ್ನು ನಾವು ಮುಂದುವರಿಸುತ್ತೇವೆ ಎಂದು ಅವರು 2.0 ಸರ್ಕಾರದ ಕೊನೆಯ ಸಂಪುಟ ಸಭೆಯಲ್ಲಿ ಹೇಳಿದರು.
ಸತತ ಮೂರನೇ ಅವಧಿಗೆ ಎನ್‌ಡಿಎ ಸರ್ಕಾರ ರಚನೆಗೆ ಅವಕಾಶ ನೀಡಿರುವ ಲೋಕಸಭೆ ಚುನಾವಣೆ ಫಲಿತಾಂಶವನ್ನು ಶ್ಲಾಘಿಸಿದ ಅವರು, ಇದು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದ ದಿಗ್ವಿಜಯ ಎಂದು ಬಣ್ಣಿಸಿದರು.ಸೋಲು ಮತ್ತು ಜಯ ರಾಜಕೀಯದ ಭಾಗ. ಈ ಸಂಖ್ಯೆಯ ಆಟ ಮುಂದುವರಿಯುತ್ತಲೇ ಇರುತ್ತದೆ ಎಂದರು.
ಕಳೆದ ಹತ್ತು ವರ್ಷಗಳಿಂದ ತಮ್ಮ ಶಕ್ತಿಮೀರಿ ಕೆಲಸ ಮಾಡಿದ ಕೇಂದ್ರ ಸಚಿವರಿಗೆ ಧನ್ಯವಾದ ಹೇಳಿದ ಮೋದಿ,ಆಡಳಿತಾರೂಢ ಸರ್ಕಾರವು ಎಲ್ಲ ಕಡೆಯೂ ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಿದೆ. ಇದನ್ನು ಭವಿಷ್ಯದಲ್ಲಿ ಕೂಡ ಮುಂದುವರಿಸುತ್ತೇವೆ. ನೀವೆಲ್ಲರೂ ಬಹಳ ಕಠಿಣ ಶ್ರಮಪಟ್ಟಿದ್ದೀರಿ ಎಂದು ಹೊಗಳಿದರು.
ಈ ವೇಳೆ ಅವರು ಲೋಕಸಭಾ ಚುನಾವಣೆ ಫಲಿತಾಂಶದ ಆತ್ಮಾವಲೋಕನ ಹಾಗೂ ಮುಂದಿನ ಸರ್ಕಾರದ ರಚನೆಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿದರು.