ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಗಡಿ ಪ್ರದೇಶಗಳಲ್ಲಿ ಮತ್ತೊಮ್ಮೆ ಘರ್ಷಣೆ ಮುಂದುವರೆದಿದ್ದು, ತಡರಾತ್ರಿ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ ಅಫ್ಘಾನಿಸ್ತಾನದ ಕನಿಷ್ಠ 10 ಮಂದಿ ಸಾವನ್ನಪ್ಪಿದ್ದಾರೆ. ಈ ಘಟನೆ ಬಳಿಕ ಅಫ್ಘಾನಿಸ್ತಾನ ಸೇನೆ ಪ್ರತಿದಾಳಿ ನಡೆಸಿದ್ದು, ಗಡಿಯ ಪ್ರದೇಶಗಳಲ್ಲಿ ಉದ್ವಿಗ್ನತೆ ಹೆಚ್ಚಿದೆ. ಎರಡೂ ರಾಷ್ಟ್ರಗಳ ಮಧ್ಯೆ ಕದನ ವಿರಾಮ ಒಪ್ಪಂದ ಉಲ್ಲಂಘನೆಯು ಹೊಸ ಬಿಕ್ಕಟ್ಟಿಗೆ ಕಾರಣವಾಗಿದೆ.
ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಆಕ್ರೋಶ ವ್ಯಕ್ತಪಡಿಸಿ, ಪಾಕ್‌ನಲ್ಲಿ ವಾಸಿಸುತ್ತಿರುವ ಅಫ್ಘಾನ ಪ್ರಜೆಗಳು ತಕ್ಷಣ ದೇಶ ತೊರೆಯಬೇಕು ಎಂದು ಎಚ್ಚರಿಸಿದ್ದಾರೆ. “ಅಫ್ಘಾನಿಸ್ತಾನ ಈಗ ತನ್ನದೇ ಸರ್ಕಾರ ಹೊಂದಿದೆ. ನಮ್ಮ ದೇಶದ ಸಂಪನ್ಮೂಲಗಳು ಪಾಕಿಸ್ತಾನಿಯರಿಗಾಗಿ ಮಾತ್ರ. ಇನ್ನು ಅಫ್ಘನ್ನರು ತಮ್ಮ ನಾಡಿಗೆ ಹಿಂತಿರುಗಬೇಕು,” ಎಂದು ಆಸಿಫ್ ಹೇಳಿದ್ದಾರೆ.
ಪಾಕಿಸ್ತಾನ ಸರ್ಕಾರದ ಪ್ರಕಾರ, ಅಫ್ಘಾನಿಸ್ತಾನದಿಂದ ಕಳೆದ ಕೆಲವು ತಿಂಗಳಿಂದ ಭಯೋತ್ಪಾದನಾ ದಾಳಿಗಳು ಹೆಚ್ಚುತ್ತಿವೆ. ಈ ಕುರಿತು ಪಾಕಿಸ್ತಾನವು ಈಗಾಗಲೇ 836 ಪ್ರತಿಭಟನಾ ಪತ್ರಗಳನ್ನು ಕಾಬೂಲ್ ಆಡಳಿತಕ್ಕೆ ಕಳುಹಿಸಿದ್ದರೂ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲವೆಂದು ಪಾಕ್ ಆರೋಪಿಸಿದೆ. “ಇನ್ನು ಮುಂದೆ ನಮ್ಮ ಎಚ್ಚರಿಕೆಗಳು ಶಾಂತಿಯುತವಾಗಿರುವುದಿಲ್ಲ. ಭಯೋತ್ಪಾದನೆಯನ್ನು ಬೆಂಬಲಿಸುವವರು ಅದರ ಬೆಲೆ ಕಟ್ಟಲೇಬೇಕಾಗುತ್ತದೆ,” ಎಂದು ಪಾಕ್ ಸರ್ಕಾರ ಸ್ಪಷ್ಟಪಡಿಸಿದೆ.
ಇದರ ಮಧ್ಯೆ ಪಾಕಿಸ್ತಾನ ಅಧಿಕಾರಿಗಳು ತಾಲಿಬಾನ್ ಸರ್ಕಾರದ ಮೇಲೂ ಆರೋಪ ಹೊರಿಸಿದ್ದಾರೆ. ಕಾಬೂಲ್ ಆಡಳಿತವು ‘ಭಾರತದ ಪ್ರಾಕ್ಸಿ’ಯಾಗಿ ಕೆಲಸ ಮಾಡುತ್ತಿದೆ ಎಂದು ಪಾಕ್ ಆರೋಪಿಸಿದೆ. “ಒಂದು ಕಾಲದಲ್ಲಿ ನಮ್ಮ ನೆರಳಿನಲ್ಲಿ ಬದುಕುತ್ತಿದ್ದವರು ಈಗ ಭಾರತದ ಬೆಂಬಲದೊಂದಿಗೆ ನಮ್ಮ ವಿರುದ್ಧ ತಿರುಗಿದ್ದಾರೆ,” ಎಂದು ಖವಾಜಾ ಆಸಿಫ್ ಕಿಡಿಕಾರಿದ್ದಾರೆ.