February 17, 2026
Tuesday, February 17, 2026
spot_img

ರಕ್ಷಣೆ, ಕೌಶಲ್ಯ, ರಫೇಲ್ ಜೆಟ್ ಖರೀದಿ: ಫ್ರಾನ್ಸ್​ ಜೊತೆ 20 ಒಪ್ಪಂದಗಳಿಗೆ ಸಹಿ ಹಾಕಿದ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈನಲ್ಲಿ ಇಂದು ಪ್ರಧಾನಿ ಮೋದಿ ಹಾಗು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ ಅವರು ರಕ್ಷಣೆ, ಕೌಶಲ್ಯ, ತಂತ್ರಜ್ಞಾನ ಸಹಕಾರ, ವ್ಯಾಪಾರ ಮತ್ತು ಆರೋಗ್ಯ ಸೇರಿದಂತೆ 20ಕ್ಕೂ ಹೆಚ್ಚು ಒಪ್ಪಂದಗಳನ್ನು ಘೋಷಿಸಿದರು.

ಮುಂಬೈನ ಲೋಕಭವನದಲ್ಲಿ ಭೇಟಿಯಾಗಿ ರಕ್ಷಣೆ, ಎಐ ಮತ್ತು ಬಾಹ್ಯಾಕಾಶ ಕ್ಷೇತ್ರಗಳ ಕುರಿತು ದ್ವಿಪಕ್ಷೀಯ ಮಾತುಕತೆ ನಡೆಸಿದರು. ಬಳಿಕ ಫ್ರಾನ್ಸ್‌ನಿಂದ 114 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವುದು ಸೇರಿದಂತೆ 20ಕ್ಕೂ ಹೆಚ್ಚು ಒಪ್ಪಂದಗಳಿಗೆ ಸಹಿ ಹಾಕಿದರು.

ಬಳಿಕ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮುಂಬೈನಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ,ನನ್ನ ಆತ್ಮೀಯ ಸ್ನೇಹಿತ ಅಧ್ಯಕ್ಷ ಮ್ಯಾಕ್ರನ್ ಅವರನ್ನ ಮುಂಬೈಗೆ ಸ್ವಾಗತಿಸಲು ನನಗೆ ಸಂತೋಷವಾಗಿದೆ. ಭಾರತ-ಫ್ರಾನ್ಸ್ ನಾವೀನ್ಯತೆಯ ವರ್ಷವನ್ನ ಪ್ರಾರಂಭಿಸುವುದರೊಂದಿಗೆ, ನಾವು ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನ ಜನರ ಪಾಲುದಾರಿಕೆಯಾಗಿ ಪರಿವರ್ತಿಸುತ್ತಿದ್ದೇವೆ. ಫ್ರಾನ್ಸ್ ಅನ್ನು ಯುರೋಪಿನ ಪ್ರಮುಖ ದ್ವಾರವೆಂದು ಬಣ್ಣಿಸಿದರು.

ರಕ್ಷಣೆ, ಶುದ್ಧ ಇಂಧನ, ಬಾಹ್ಯಾಕಾಶ, ಸ್ಟಾರ್ಟ್‌ಅಪ್‌, ನಿರ್ಣಾಯಕ ಖನಿಜ, ಜೈವಿಕ ತಂತ್ರಜ್ಞಾನಗಳಲ್ಲಿ ಬಲವಾದ ಸಂಪರ್ಕ ನಿರ್ಮಿಸ್ತೇವೆ. ಅದಕ್ಕಾಗಿ ಇಂಡೋ – ಫ್ರೆಂಚ್‌ ಸೆಂಟರ್ ಫಾರ್ ಎಐ ಇನ್ ಹೆಲ್ತ್, ಇಂಡೋ-ಫ್ರೆಂಚ್ ಸೆಂಟರ್ ಫಾರ್ ಡಿಜಿಟಲ್ ಸೈನ್ಸ್ ಅಂಡ್ ಟೆಕ್ನಾಲಜಿ ಮತ್ತು ನ್ಯಾಷನಲ್ ಸೆಂಟರ್ ಫಾರ್ ಅಲೈಯನ್ಸ್ ಫಾರ್ ಸ್ಕಿಲ್ಲಿಂಗ್ ಇನ್ ಏರೋನಾಟಿಕ್ಸ್ ಸಂಸ್ಥೆಗಳನ್ನ ಪ್ರಾರಂಭಿಸುತ್ತಿದ್ದೇವೆ. ಇವು ಕೇವಲ ಸಂಸ್ಥೆಗಳಲ್ಲ, ಅವು ಭವಿಷ್ಯವನ್ನ ನಿರ್ಮಿಸುವ ವೇದಿಕೆಗಳಾಗಿವೆ ಎಂದು ಬಣ್ಣಿಸಿದರು.

ಈ ವೇಳೆ ಫ್ರೆಂಚ್ ಮೂಲದ H125 ಸಿಂಗಲ್-ಎಂಜಿನ್ ಲೈಟ್ ಯುಟಿಲಿಟಿ ಹೆಲಿಕಾಪ್ಟರ್‌ಗಳಿಗಾಗಿ ಭಾರತದಲ್ಲಿ ಅಸೆಂಬ್ಲಿ ಲೈನ್ ಅನ್ನು ಸ್ಥಾಪಿಸುವುದಾಗಿಯೂ ಮೋದಿ ಘೋಷಿಸಿದರು.

ಅಂತಾರಾಷ್ಟ್ರೀಯ ಸೌರ ಒಕ್ಕೂಟ, ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಮತ್ತು ಜಂಟಿ ಅಭಿವೃದ್ಧಿ ಯೋಜನೆಗಳ ಮೂಲಕ ಮಾನವ ಅಭಿವೃದ್ಧಿಯನ್ನ ನಾವು ಖಚಿತಪಡಿಸುತ್ತೇವೆ. ಬಹುಪಕ್ಷೀಯತೆ, ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕ ಸ್ಥಿರತೆ ಮತ್ತು ಸಮೃದ್ಧಿಗಾಗಿ ಪ್ರಯತ್ನಗಳನ್ನ ಬಲಪಡಿಸುವುದನ್ನು ಮುಂದುವರಿಸುತ್ತೇವೆ ಎಂದು ಭರವಸೆ ನೀಡಿದರು.

ಅಧ್ಯಕ್ಷ ಮ್ಯಾಕ್ರನ್ ಮಾತಾಡಿ, 4ನೇ ಬಾರಿ ಆತ್ಮೀಯ ಸ್ವಾಗತಕ್ಕಾಗಿ ನಿಮಗೆ ಧನ್ಯವಾದಗಳು ಸಲ್ಲಿಸುತ್ತೇನೆ. ಭಾರತ ಮತ್ತು ಫ್ರಾನ್ಸ್ ನಡುವಿನ ದ್ವಿಪಕ್ಷೀಯ ಸಂಬಂಧವು ನಿಜವಾಗಿಯೂ ಗಮನಾರ್ಹ ಮತ್ತು ವಿಶಿಷ್ಟವಾಗಿರಲಿದೆ. ರಫೇಲ್ ಜೆಟ್‌ಗಳಿಂದ ಜಲಾಂತರ್ಗಾಮಿ ನೌಕೆಗಳವರೆಗೆ, ನಾವು ರಕ್ಷಣಾ ಸಹಕಾರವನ್ನು ವಿಸ್ತರಿಸುತ್ತಿದ್ದೇವೆ. ನಮ್ಮ ಸಹಯೋಗವನ್ನು ವಿಶೇಷ ಕಾರ್ಯತಂತ್ರದ ಪಾಲುದಾರಿಕೆಗೆ ಏರಿಸಲು ನಾವು ಇಂದು ನಿರ್ಧರಿಸಿದ್ದೇವೆ, ಅದಕ್ಕೆ ಹೊಸ ಸ್ಥಾನಮಾನವನ್ನು ನೀಡುತ್ತೇವೆ ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !