ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಬರೆದ ಪೋಸ್ಟ್‌ಗಳನ್ನು ಡಿಲೀಟ್ ಮಾಡುವಂತೆಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಕ್ರಿಮಿನಲ್ ಕೇಸ್ ಗಳನ್ನು ರದ್ದುಗೊಳಿಸುವಂತೆ ಕೋರಿ ರೂಪಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿಥಾಲ್ ಅವರನ್ನೊಳಗೊಂಡ ಪೀಠ, ಸಿಂಧೂರಿ ವಿರುದ್ಧ ಬರೆದಿರುವ ಪೋಸ್ಟ್ ಅನ್ನು ಡಿಲೀಟ್ ಮಾಡಲು ಇಷ್ಟವಿಲ್ಲದಿದ್ದರೆ ತಮ್ಮ ಬರಹವನ್ನು ವಾಪಸ್ ಪಡೆದಿರೋದಾಗಿ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದು ಹಾಕಬೇಕು ಎಂದು ಸೂಚನೆ ನೀಡಿದೆ.
ಈ ವರ್ಷದ ಆರಂಭದಲ್ಲಿ ರೂಪಾ ಅವರು ಸಿಂಧೂರಿ ಅವರ ಬಗೆಗಿನ ವೈಯಕ್ತಿಕ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಬಳಿಕ ಸಾರ್ವಜನಿಕ ವೇದಿಕೆಯಲ್ಲಿ ಗಲಾಟೆ ಮಾಡಿಕೊಂಡಿದ್ದರು.
ಬುಧವಾರ ಸುಪ್ರೀಂ ಕೋರ್ಟ್ ಇಬ್ಬರೂ ಅಧಿಕಾರಿಗಳು ತಮ್ಮ ವಿವಾದಗಳನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಿಕೊಳ್ಳುವಂತೆ ಸೂಚಿಸಿತ್ತು. ಆದರೆ ಇಂದು ಮಧ್ಯಸ್ಥಿಕೆ ವಿಫಲವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಇಬ್ಬರೂ ಅಧಿಕಾರಿಗಳು ಖುದ್ದು ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಅಧಿಕಾರಿಗಳು ತಮ್ಮ ವಿವಾದಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ತಿಳಿದ ಪೀಠ ಬೇಸರ ವ್ಯಕ್ತಪಡಿಸಿತು. ಐಎಎಸ್-ಐಪಿಎಸ್ ಅಧಿಕಾರಿಗಳು ಹೀಗೆ ಜಗಳವಾಡಿದರೆ ಆಡಳಿತ ಹೇಗೆ? ಈ ವಿಷಯವನ್ನು ಈಗ ಅರ್ಹತೆಯ ಮೇಲೆ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಮೂರ್ತಿ ಓಕಾ ಆಶ್ಚರ್ಯ ವ್ಯಕ್ತಪಡಿಸಿ ಹೇಳಿದರು.