ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ದೆಹಲಿಯಲ್ಲಿ ಚಳಿಗಾಲ ಬಂತೆಂದರೆ ಸಾಕು ವಾಯುಮಾಲಿನ್ಯವು ವಿಪರೀತವಾಗಿ ಹೆಚ್ಚಾಗುತ್ತದೆ. ಅಷ್ಟೊತ್ತಿಗಾಗಲೇ ದೆಹಲಿ ನೆರೆ ರಾಜ್ಯಗಳಲ್ಲಿ ಬೆಳೆ ಕಟಾವು ಮುಗಿದು, ರೈತರು ಗದ್ದೆಯಲಲ್ಲಿ ಒಣಗಿದ ಹುಲ್ಲಿಗೆ ಬೆಂಕಿ ಹಚ್ಚುತ್ತಾರೆ. ಇದರಿಂದ ಬರುವ ಹೊಗೆಯು ದೆಹಲಿಯ ವಾತಾವರಣವನ್ನು ಕಲುಷಿತಗೊಳಿಸುತ್ತಿದೆ. ಇದರಿಂದ ಹೊರಬರಲು ದೆಹಲಿ ಪರಿಸರ ಸಚಿವ ಗೋಪಾಲ್ ರಾಯ್, ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್‌ಗೆ ಪತ್ರ ಬರೆದಿದ್ದಾರೆ.
ವಾಯುಮಾಲಿನ್ಯದ ವಿಷಯದ ಕುರಿತು ಸಂಬಂಧಿಸಿದ ರಾಜ್ಯಗಳೊಂದಿಗೆ ಜಂಟಿ ಪರಿಶೀಲನಾ ಸಭೆ ನಡೆಸುವಂತೆ ಕೋರಿದ್ದಾರೆ. ದೆಹಲಿ ನಿವಾಸಿಗಳನ್ನು ಮಾಲಿನ್ಯದ ಬೆದರಿಕೆಯಿಂದ ರಕ್ಷಿಸುವ ಯೋಜನೆಗಳು ಮತ್ತು ಅನುಷ್ಠಾನದ ಬಗ್ಗೆ ಪರಿಶೀಲನಾ ಸಭೆ ನಡೆಸುವಂತೆ ಗೋಪಾಲ್ ರಾಯ್ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.
ಚಳಿಗಾಲದಲ್ಲಿ ಹುಲ್ಲು ಸುಡುವಿಕೆ, ಪಟಾಕಿ, ವಾಹನ ಮಾಲಿನ್ಯ, ಧೂಳಿನ ಮಾಲಿನ್ಯ ಈ ಎಲ್ಲ ಕಾರಣಗಳನ್ನು ಇಟ್ಟುಕೊಂಡು ಈ ಬಾರಿ ದೆಹಲಿ ಸರ್ಕಾರ 15 ಅಂಶಗಳ ಆಧಾರದ ಮೇಲೆ ಚಳಿಗಾಲದ ಕ್ರಿಯಾ ಯೋಜನೆ ಸಿದ್ಧಪಡಿಸುತ್ತಿದೆ.
15 ಫೋಕಸ್ ಪಾಯಿಂಟ್‌ಗಳು ಮುಖ್ಯವಾಗಿ ಹಾಟ್ ಸ್ಪಾಟ್‌ಗಳು, ಲ್ಯಾಂಡ್‌ಫಿಲ್‌ಗಳು, ಧೂಳಿನ ಮಾಲಿನ್ಯ, ವಾಹನ ಮಾಲಿನ್ಯ, ಕಸವನ್ನು ತೆರೆದು ಸುಡುವಿಕೆ, ಕೈಗಾರಿಕಾ ಮಾಲಿನ್ಯ, ಗ್ರೀನ್ ವಾರ್ ರೂಮ್, ಗ್ರೀನ್ ಅಪ್ಲಿಕೇಶನ್, ನೈಜ ಸಮಯದ ಮೌಲ್ಯಮಾಪನ ಅಧ್ಯಯನ, ಇ-ತ್ಯಾಜ್ಯ ಪರಿಸರ ಉದ್ಯಾನವನ, ತೋಟಗಾರಿಕೆ, ನಗರ ಕೃಷಿ, ಸಾರ್ವಜನಿಕ ಸಹಭಾಗಿತ್ವಕ್ಕೆ ಉತ್ತೇಜನ, ಪಟಾಕಿ ನಿಷೇಧ, ಕೇಂದ್ರ ಸರ್ಕಾರ ಮತ್ತು ನೆರೆಯ ರಾಜ್ಯಗಳೊಂದಿಗೆ ಚರ್ಚೆ ಇವೇ ಚಳಿಗಾಲದ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ ಎಲ್ಲಾ ಇಲಾಖೆಗಳಿಗೆ ವಿವಿಧ ಜವಾಬ್ದಾರಿಗಳನ್ನು ವಹಿಸಲಾಗಿದೆ. ಇದರ ಅಡಿಯಲ್ಲಿ ಪರಿಸರ ಇಲಾಖೆಯು ಜಂಟಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುತ್ತದೆ.