ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಮುಗಿದ ತಕ್ಷಣ ನೇರವಾಗಿ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಿದ ರಾಹುಲ್ ಇಂಗ್ಲೆಂಡ್ ಲಯನ್ಸ್ ವಿರುದ್ಧದ 2ನೇ ಅನೌಪಚಾರಿಕ ಟೆಸ್ಟ್ ಪಂದ್ಯದಲ್ಲಿ ಭಾರತ ಎ ಪರವಾಗಿ ಅಮೋಘ ಶತಕ ಸಿಡಿಸಿ ಮಿಂಚಿದ್ದಾರೆ.
ಇಂಗ್ಲೆಂಡ್ ಲಯನ್ಸ್ ವಿರುದ್ಧ ನಾರ್ಥಾಂಪ್ಟನ್‌ನ ಕೌಂಟಿ ಗ್ರೌಂಡ್‌ನಲ್ಲಿ ನಡೆದ ಎರಡನೇ ಅನೌಪಚಾರಿಕ ಟೆಸ್ಟ್ ಪಂದ್ಯದಲ್ಲಿ ಭಾರತ ‘ಎ’ ತಂಡದ ಪರ ಕಣಕ್ಕಿಳಿದ ರಾಹುಲ್, ಆಕರ್ಷಕ ಶತಕ ಸಿಡಿಸಿದ್ದಾರೆ. ರೋಹಿತ್ ಶರ್ಮಾ ನಿವೃತ್ತಿಯಿಂದಾಗಿ ತೆರವಾಗಿರುವ ಆರಂಭಿಕ ಸ್ಥಾನಕ್ಕೆ ಇಂಗ್ಲೆಂಡ್ ಸರಣಿಯಲ್ಲಿ ರಾಹುಲ್‌ನ್ನು ಆಡಿಸುವ ಸಾಧ್ಯತೆ ಹೆಚ್ಚು. ಹೀಗಾಗಿಯೇ ಅಭ್ಯಾಸ ಪಂದ್ಯದಲ್ಲೂ ಯಶಸ್ವಿ ಜೈಸ್ವಾಲ್ ಜೊತೆ ರಾಹುಲ್ ಇನ್ನಿಂಗ್ಸ್ ಆರಂಭಿಸಿದರು.
ಈ ಪಂದ್ಯದಲ್ಲಿ ರಾಹುಲ್ 151 ಎಸೆತಗಳಲ್ಲಿ 13 ಬೌಂಡರಿಗಳು ಮತ್ತು 1 ಸಿಕ್ಸರ್‌ನೊಂದಿಗೆ ಶತಕ ಪೂರೈಸಿದರು. ತಮ್ಮ ಕೆರಿಯರ್‌ನ 19ನೇ ಪ್ರಥಮ ದರ್ಜೆ ಶತಕ ದಾಖಲಿಸಿದರು. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಟೆಸ್ಟ್ ನಿವೃತ್ತಿಯ ನಂತರ, ರಾಹುಲ್ ಭಾರತ ತಂಡದ ಹಿರಿಯ ಬ್ಯಾಟ್ಸ್‌ಮನ್ ಆಗಿದ್ದಾರೆ.