ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಕೆಂಪು ಕೋಟೆಯ ಮೆಟ್ರೋ ಸ್ಟೇಷನ್ ಬಳಿ ಇಂದು ಸಂಜೆ 6.55ಕ್ಕೆ ಕಾರಿನಲ್ಲಿ ಸ್ಫೋಟ ಸಂಭವಿಸಿದ್ದು, ಈ ವೇಳೆ 11 ಜನರು ಮೃತಪಟ್ಟಿದ್ದಾರೆ. ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1ರ ಬಳಿ ಅಳವಡಿಸಲಾದ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ತನಿಖೆಗಾಗಿ ಎನ್ಐಎ, ಎನ್ಎಸ್ಜಿ ಮತ್ತು ದೆಹಲಿ ಪೊಲೀಸರ ತಂಡಗಳನ್ನು ನಿಯೋಜಿಸಲಾಗಿದೆ.
ದೆಹಲಿಯಲ್ಲಿ ಸ್ಫೋಟ ಉಂಟಾದ ಹಿನ್ನಲೆಯಲ್ಲಿ ಗುಜರಾತ್‌ನಲ್ಲಿದ್ದ ದೆಹಲಿ ಲೆಫ್ಟಿನೆಂಟ್ ಜನರಲ್ ವಿನಯ್ ಕುಮಾರ್ ಸಕ್ಸೇನಾ ಹಾಗೂ ದೆಹಲಿಯ ಸಚಿವ ಕಪಿಲ್ ಮಿಶ್ರಾ ದೆಹಲಿಯತ್ತ ಆಗಮಿಸಿದ್ದಾರೆ. ತುರ್ತು ತನಿಖೆ ನಡೆಸಿ ವರದಿ ಸಲ್ಲಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚಿಸಿದ್ದಾರೆ.
ಗಾಯದಿಂದ ಕನಿಷ್ಠ 15 ಮಂದಿಯನ್ನು ಲೋಕ ನಾಯಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕ ನಾಯಕ್ ಆಸ್ಪತ್ರೆಯಲ್ಲಿ ಭೇಟಿ ನೀಡಿ ಸ್ಫೋಟದಲ್ಲಿ ಗಾಯಗೊಂಡ ಜನರನ್ನು ಭೇಟಿಯಾಗಿ ಆರೋಗ್ಯವನ್ನು ವಿಚಾರಿಸಿದರು. ಗಾಯಾಳುಗಳ ಆರೋಗ್ಯದ ಕುರಿತು ವೈದ್ಯರಿಂದ ಮಾಹಿತಿ ಪಡೆದಿದ್ದಾರೆ. ಎಲ್ಲಾ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ಸೂಚಿಸಿದ್ದಾರೆ. ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.
ಈ ಘಟನೆಯ ಕುರಿತು ದೆಹಲಿ ಪೊಲೀಸ್ ಆಯುಕ್ತ ಸತೀಶ್ ಗೋಲ್ಚಾ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಅವರು ಗುಪ್ತಚರ ಬ್ಯೂರೋ (ಐಬಿ) ನಿರ್ದೇಶಕ ತಪನ್ ಕುಮಾರ್ ಅವರೊಂದಿಗೂ ಸಂಪರ್ಕದಲ್ಲಿದ್ದಾರೆ. ಈ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

