ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತ್ತ ರೈತರು ‘ದೆಹಲಿ ಚಲೋ’ ಪ್ರತಿಭಟನೆ ಕೈಗೊಂಡಿರುವ ಬೆನ್ನಲ್ಲೇ ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು ಇಂದು (ಶುಕ್ರವಾರ) ಬೆಳೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ.
ಇಂದು ಹರಿಯಾಣ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ ಅವರು, ‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ (ಪಿಎಸಿಎಸ್) ರೈತರು ಪಡೆದಿರುವ ಬೆಳೆ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.
ಎಂಎಫ್‌ಎಂಬಿನಲ್ಲಿ (ಮೇರಿ ಫಸಲ್ ಮೇರಾ ಬಯೋರಾ) ನೋಂದಾಯಿಸಿರುವ ರೈತರು 2023ರ ಸೆಪ್ಟೆಂಬರ್ 30ವರೆಗೆ ಬೆಳೆ ಸಾಲವನ್ನು ಪಡೆದಿದ್ದು, 2024ರ ಮೇ 31ರೊಳಗೆ ಮೂಲ ಮೊತ್ತವನ್ನು ಪಾವತಿಸಿದರೆ ಅಂತಹ ರೈತರ ಬೆಳೆ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ರೈತರ ಕಲ್ಯಾಣಕ್ಕಾಗಿ ಹಲವು ಕ್ರಮಗಳನ್ನು ನಮ್ಮ ಸರಕಾರ ಕೈಗೊಂಡಿದೆ. 14 ಪ್ರಮುಖ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡಲಾಗುತ್ತಿದೆ ಎಂದು ಹೇಳಿದರು.
ಇದೇ ವೇಳೆ ಕರ್ತವ್ಯದ ವೇಳೆ ಮೃತಪಟ್ಟ ಸೈನಿಕರ ಕುಟುಂಬಸ್ಥರಿಗೆ ನೀಡುವ ಪರಿಹಾರದ ಮೊತ್ತವನ್ನು ₹1 ಕೋಟಿಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.
‘2023-24ನೇ ಸಾಲಿನಲ್ಲಿ ₹1,70,490.84 ಕೋಟಿ ಮೊತ್ತದ ಬಜೆಟ್ ಅನ್ನು ಮಂಡಿಸಲಿದ್ದೇನೆ. 2024-25ನೇ ಸಾಲಿನಲ್ಲಿ ₹1,89,876.61 ಕೋಟಿ ಮೊತ್ತದ ಬಜೆಟ್ ಅನ್ನು ಮಂಡಿಸಲಿದ್ದೇನೆ. ಇದು ಈ ಬಾರಿಯ ಬಜೆಟ್ ಮೊತ್ತಗಿಂತ ಶೇ 11.37ರಷ್ಟು ಹೆಚ್ಚಿರಲಿದೆ’ ಎಂದು ಖಟ್ಟರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.