ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲಾ ಶುಲ್ಕಗಳನ್ನು ಅನಿಯಂತ್ರಿತವಾಗಿ ಹೆಚ್ಚಳ ಮಾಡಿರುವ ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಲಾಗುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಹೇಳಿದ್ದಾರೆ.
ಖಾಸಗಿ ಶಾಲೆಗಳಿಂದ ಅನಿಯಂತ್ರಿತ ಶುಲ್ಕ ಹೆಚ್ಚಳ ಸಂಬಂಧ ದೂರುಗಳು ಸಲ್ಲಿಕೆಯಾಗಿದ್ದವು. ಶುಲ್ಕ ಭರಿಸದಿದ್ದಲ್ಲಿ ಅಂಥ ಮಕ್ಕಳನ್ನು ಶಾಲೆಯಿಂದ ಹೊರಹಾಕಲಾಗುತ್ತಿದೆ ಎಂದು ಹಲವರು ದೂರಿದ್ದರು.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರೇಖಾ ಗುಪ್ತಾ, ಶುಲ್ಕದ ನೆಪದಲ್ಲಿ ಪಾಲಕರನ್ನು ಶೋಷಿಸುವ ಹಕ್ಕು ಯಾವುದೇ ಶಾಲೆಗಳಿಗೂ ಇಲ್ಲ. ಅದರಲ್ಲೂ ವಿದ್ಯಾರ್ಥಿಗಳನ್ನು ಶಾಲೆಯಿಂದ ಹೊರಹಾಕುವುದು ನ್ಯಾಯವಲ್ಲ. ಎಲ್ಲಾ ಶಾಲೆಗಳೂ ನಿರ್ದಿಷ್ಟ ಕಾನೂನನ್ನು ಪಾಲಿಸಲೇಬೇಕು. ಅದನ್ನು ಉಲ್ಲಂಘಿಸಿದಲ್ಲಿ ಕ್ರಮ ಎದುರಿಸಲು ಸಜ್ಜಾಗಬೇಕು ಎಂದು ಎಚ್ಚರಿಸಿದ್ದಾರೆ.
ಯಾವುದೇ ರೀತಿಯ ಅನ್ಯಾಯ, ಅಕ್ರಮ ಹಾಗೂ ಶೋಷಣೆಗಳ ಕುರಿತು ರಾಜ್ಯದಲ್ಲಿ ಶೂನ್ಯ ಸಹಿಷ್ಣುತೆ ಜಾರಿಯಲ್ಲಿದೆ. ಯಾವುದೇ ನಿರ್ಲಕ್ಷ್ಯವನ್ನು ಸಹಿಸಲಾಗದು. ಪ್ರತಿಯೊಂದು ಮಗುವಿಗೂ ನ್ಯಾಯ, ಘನತೆ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ನಾವು ಬದ್ಧ ಎಂದು ಹೇಳಿದ್ದಾರೆ.