ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮೇಯರ್ ಮತ್ತು ಉಪಮೇಯರ್ ಆಯ್ಕೆ ಪ್ರಕ್ರಿಯೆ ಸೋಮವಾರ (ಫೆಬ್ರವರಿ 6) ಇಂದು ನಡೆಯಲಿದೆ. ಈಗಾಗಲೇ ಈ ಪ್ರಕ್ರಿಯೆ ಆರಂಭವಾಗಿದ್ದು, ಎರಡು ಬಾರಿ ಮುಂದೂಡಲಾಗಿದೆ. ದೆಹಲಿ ಮುನ್ಸಿಪಲ್ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಎರಡು ತಿಂಗಳಾದರೂ ಮೇಯರ್ ಯಾರೆಂಬುದರ ಆಯ್ಕೆ ಮಾತ್ರ ವಿಘ್ನಗಳೆದುರಾಗುತ್ತಲೇ ಇವೆ.
250 ಸ್ಥಾನಗಳ ದೆಹಲಿ ಪುರಸಭೆಯಲ್ಲಿ ಆಮ್ ಆದ್ಮಿ ಪಕ್ಷ 134 ಸ್ಥಾನಗಳನ್ನು ಗೆದ್ದುಕೊಂಡಿದೆ. ಮೇಯರ್ ಹುದ್ದೆಯನ್ನು ಭದ್ರಪಡಿಸಿಕೊಳ್ಳಲು ಬೇಕಾದಷ್ಟು ಸೀಟುಗಳನ್ನು ಗೆದ್ದು, ಮೇಯರ್ ಸ್ಥಾನ ಸುಲಭವಾಗಿ ಸಿಗಲಿದೆ ಎಂದು ಭಾವಿಸಿದ್ದರು. ಆದರೆ, ಹಲವು ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎರಡು ತಿಂಗಳು ಕಳೆದರೂ ಮೇಯರ್ ಚುನಾವಣೆ ಪೂರ್ಣಗೊಂಡಿಲ್ಲ. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಕಾಯಿದೆ, 1957 ರ ಪ್ರಕಾರ, ಮೇಯರ್ ಮತ್ತು ಉಪ ಮೇಯರ್ ಚುನಾವಣೆಯನ್ನು ಮೊದಲ ಪುರಸಭೆಯ ಸಭೆಗಳಲ್ಲಿ ಪೂರ್ಣಗೊಳಿಸಬೇಕು. ಆದರೆ, ಈವರೆಗೆ ಎರಡು ಬಾರಿ ಸಭೆ ನಡೆಸಿದರೂ ಚುನಾವಣೆ ಪೂರ್ಣಗೊಂಡಿಲ್ಲ.
ಜನವರಿ 6 ಮತ್ತು ಜನವರಿ 24 ರಂದು ನಡೆದ ಸಭೆಗಳಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ಉದ್ಭವಿಸಿದ ಹಲವು ವಿವಾದಗಳ ಹಿನ್ನೆಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಯಿತು. ಇದರೊಂದಿಗೆ ಇದೇ 6ರಂದು ಮರು ಚುನಾವಣೆ ನಡೆಯಲಿದೆ. ಇಂದಾದರೂ ಸರಿಯಾಗಿ ಚುನಾವಣೆ ನಡೆದು ಮೇಯರ್ ಆಯ್ಕೆಯಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಮೇಯರ್ ಹುದ್ದೆಗೆ ಎಎಪಿ ಹೊಸ ತಂತ್ರ ಅನುಸರಿಸುತ್ತಿದೆ. ಐದು ವರ್ಷ.. ಐವರನ್ನು ಮೇಯರ್ ಆಗಿ ಆಯ್ಕೆ ಮಾಡಲು ನಿರ್ಧರಿಸಿದೆ.