ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸಚಿವ ಸಂಪುಟ ಪುನರ್‌ರಚನೆ ಚರ್ಚೆಗಳು ತೀವ್ರಗೊಂಡಿರುವ ನಡುವೆಯೇ, ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ತೆರಳಿದ್ದ ಕರ್ನಾಟಕ ಕಾಂಗ್ರೆಸ್ ಹಿರಿಯ ಶಾಸಕರ ತಂಡ ಅಯೋಧ್ಯೆಗೆ ಭೇಟಿ ನೀಡಿ ರಾಮಲಲಾ ದರುಶನ ಪಡೆದಿದೆ. ವರಿಷ್ಠ ನಾಯಕರು ಭೇಟಿಗೆ ಸಿಗದ ಹಿನ್ನೆಲೆಯಲ್ಲಿ ಶಾಸಕರು ಈ ಧಾರ್ಮಿಕ ಪ್ರವಾಸ ಕೈಗೊಂಡಿದ್ದು, ಬಳಿಕ ಮತ್ತೆ ದೆಹಲಿಗೆ ಮರಳಿದ್ದಾರೆ.
ಶಾಸಕರ ತಂಡದಲ್ಲಿ ಟಿ.ಬಿ. ಜಯಚಂದ್ರ ಸೇರಿದಂತೆ ಸುಮಾರು 15 ಮಂದಿ ಭಾಗಿಯಾಗಿದ್ದರು. ದರುಶನದ ಬಳಿಕ ಮಾತನಾಡಿದ ಜಯಚಂದ್ರ, ಶ್ರೀರಾಮನ ಆಶೀರ್ವಾದ ಪಡೆಯುವುದು ಬಹುಕಾಲದ ಆಸೆಯಾಗಿತ್ತು ಎಂದು ಹೇಳಿದರು. ರಾಮಲಲಾ ವಿಗ್ರಹವನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿರುವುದು ಕರ್ನಾಟಕಕ್ಕೆ ಹೆಮ್ಮೆ ಎಂದೂ ಅವರು ತಿಳಿಸಿದರು.
ಇದನ್ನೂ ಓದಿ:
ಸಂಪುಟದಲ್ಲಿ ಬದಲಾವಣೆ ಹಾಗೂ ಹೊಸ ಮುಖಗಳಿಗೆ ಅವಕಾಶ ನೀಡುವ ವಿಚಾರವಾಗಿ ಪಕ್ಷದ ಹೈಕಮಾಂಡ್ ಜೊತೆ ಚರ್ಚಿಸಲು ಶಾಸಕರು ದೆಹಲಿಗೆ ತೆರಳಿದ್ದರು. ಆದರೆ ಇದಕ್ಕೂ ಮೊದಲು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡುವ ಪ್ರಯತ್ನ ಫಲ ನೀಡಲಿಲ್ಲ.
ಏಪ್ರಿಲ್ 16ರಿಂದ ಸಂಸತ್ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆ, ಕಾಂಗ್ರೆಸ್ ವರಿಷ್ಠರು ದೆಹಲಿಯಲ್ಲಿ ಲಭ್ಯರಾಗುವ ನಿರೀಕ್ಷೆಯಿದ್ದು, ಶಾಸಕರು ಮತ್ತೆ ಭೇಟಿಗೆ ಯತ್ನಿಸುವ ಸಾಧ್ಯತೆ ಇದೆ. ಸಚಿವ ಸ್ಥಾನಗಳ ಕುರಿತ ಒತ್ತಡದ ರಾಜಕೀಯಕ್ಕೆ ಈ ಬೆಳವಣಿಗೆ ಹೊಸ ತಿರುವು ನೀಡಿದೆ.



