ದೆಹಲಿಯ ಬೀದಿ ನಾಯಿಗಳ ಸ್ಥಳಾಂತರ ವಿವಾದ: ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ ಎಂದ ರಾಜ್ ಬಿ. ಶೆಟ್ಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ನಗರದಲ್ಲಿ ಇತ್ತೀಚೆಗೆ ನಡೆದ ದುರಂತ ಘಟನೆ ದೇಶವ್ಯಾಪಿ ಚರ್ಚೆಗೆ ಕಾರಣವಾಗಿದೆ. 6 ವರ್ಷದ ಚಾವಿ ಶರ್ಮಾ ಎಂಬ ಬಾಲಕಿ ಬೀದಿ ನಾಯಿಯ ಕಡಿತದಿಂದ ರೇಬೀಸ್ ಸೋಂಕಿಗೆ ಒಳಗಾಗಿ ಮೃತಪಟ್ಟಿರುವ ಘಟನೆ ಹಿನ್ನೆಲೆಯಲ್ಲಿ, ಸುಪ್ರೀಂಕೋರ್ಟ್ ತುರ್ತು ಆದೇಶ ಹೊರಡಿಸಿದೆ. ಈ ಆದೇಶದ ಪ್ರಕಾರ, ಮುಂದಿನ 8 ವಾರಗಳ ಒಳಗೆ ನಗರದಲ್ಲಿರುವ ಎಲ್ಲ ಬೀದಿ ನಾಯಿಗಳನ್ನು ಹಿಡಿದು, ಸರ್ಕಾರ ಮಾನ್ಯತೆ ನೀಡಿರುವ ನಾಯಿಗಳ ಆಶ್ರಯತಾಣಗಳಿಗೆ ಸ್ಥಳಾಂತರಿಸಬೇಕೆಂದು ಸೂಚಿಸಲಾಗಿದೆ.

ಆದರೆ, ಈ ನಿರ್ಧಾರಕ್ಕೆ ಹಲವಾರು ಪ್ರಾಣಿ ಹಿತೈಷಿಗಳು ಮತ್ತು ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಅವರ ಅಭಿಪ್ರಾಯದಲ್ಲಿ, ಬೀದಿ ನಾಯಿಗಳನ್ನು ಸಾಮೂಹಿಕವಾಗಿ ಸ್ಥಳಾಂತರಿಸುವುದು ಮಾನವೀಯ ದೃಷ್ಟಿಯಿಂದ ಸರಿಯಲ್ಲದೆ, ಪರಿಸರ ಸಮತೋಲನಕ್ಕೂ ಹಾನಿ ಉಂಟುಮಾಡಬಹುದು. ಇದೇ ಹಿನ್ನಲೆಯಲ್ಲಿ, ನಟ ಹಾಗೂ ನಿರ್ದೇಶಕ ರಾಜ್ ಬಿ. ಶೆಟ್ಟಿ ತಮ್ಮದೇ ಶೈಲಿಯಲ್ಲಿ ಈ ಆದೇಶದ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಜ್ ಬಿ. ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶ್ವಾನಗಳ ಜೊತೆಗಿನ ಕೆಲವು ಫೋಟೋಗಳನ್ನು ಹಂಚಿಕೊಂಡು, “ಈ ಜೀವಿಗಳು ನನಗೆ ನೆಮ್ಮದಿ ನೀಡುತ್ತವೆ. ನನಗಷ್ಟೇ ಅಲ್ಲ, ಸಾವಿರಾರು ಜನರಿಗೆ ಇವು ನೋವನ್ನು ಗುಣಪಡಿಸುವ ಶಕ್ತಿ ಹೊಂದಿವೆ” ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, “ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಸುಪ್ರೀಂಕೋರ್ಟ್ ಈ ಆದೇಶವನ್ನು ಮರುಪರಿಶೀಲಿಸಲಿ ಎಂದು ನಾನು ಆಶಿಸುತ್ತೇನೆ” ಎಂದಿದ್ದಾರೆ.

ಇದರೊಂದಿಗೆ ರಾಜ್ ಅವರು ತಮ್ಮ ವೈಯಕ್ತಿಕ ಅನುಭವವನ್ನೂ ಹಂಚಿಕೊಂಡಿದ್ದಾರೆ. “ನಾನು ಸ್ವತಃ 7 ಬೀದಿ ನಾಯಿಗಳನ್ನು ಸಾಕುತ್ತಿದ್ದೇನೆ. ಸಮಾಜ ಜವಾಬ್ದಾರಿ ತೆಗೆದುಕೊಂಡರೆ, ಇಂತಹ ಕಠಿಣ ಕ್ರಮಗಳ ಅವಶ್ಯಕತೆ ಇರುವುದಿಲ್ಲ. ಪ್ರಾಣಿಗಳನ್ನು ದತ್ತು ಪಡೆದು ಸಾಕುವುದೇ ಶ್ರೇಷ್ಠ ಪರಿಹಾರ” ಎಂದು ತಿಳಿಸಿದ್ದಾರೆ.

ಈ ವಿಚಾರದಲ್ಲಿ ಪ್ರಾಣಿ ಹಿತೈಷಿಗಳ ಅಭಿಪ್ರಾಯ ಏನೆಂದರೆ, ಬೀದಿ ನಾಯಿಗಳ ಸಮಸ್ಯೆಗೆ ಮೂಲಭೂತ ಪರಿಹಾರವೆಂದರೆ, ಅವುಗಳ ನಿಷ್ಕ್ರಿಯೀಕರಣ (Sterilization) ಮತ್ತು ಲಸಿಕಾ ಕಾರ್ಯಕ್ರಮಗಳನ್ನು ಬಲಪಡಿಸುವುದು. ಸ್ಥಳಾಂತರಕ್ಕಿಂತಲೂ ಶಿಕ್ಷಣ, ಜಾಗೃತಿ ಮತ್ತು ಮಾನವೀಯ ಮನೋಭಾವವೇ ದೀರ್ಘಕಾಲಿಕ ಪರಿಹಾರ ಎಂದು ಅವರು ಹೇಳುತ್ತಿದ್ದಾರೆ.

ಬೀದಿ ನಾಯಿಗಳ ಸಮಸ್ಯೆ ಮಾನವ ಸುರಕ್ಷತೆ ಮತ್ತು ಪ್ರಾಣಿ ಹಿತಾಸಕ್ತಿಗಳ ನಡುವೆ ಸಮತೋಲನ ಸಾಧಿಸುವ ಸವಾಲಾಗಿದೆ. ಸುಪ್ರೀಂಕೋರ್ಟ್ ಆದೇಶ ತುರ್ತು ಕ್ರಮವಾದರೂ, ದೀರ್ಘಕಾಲೀನ ಪರಿಹಾರಕ್ಕಾಗಿ ಸಮಾಜದ ಜವಾಬ್ದಾರಿ, ಸರ್ಕಾರದ ಯೋಜನೆಗಳು ಮತ್ತು ಮಾನವೀಯತೆ ಈ ಮೂರು ಸೇರಿ ಕಾರ್ಯನಿರ್ವಹಿಸುವ ಅಗತ್ಯವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Logged in as Ashika HD. Log out?

Please enter your comment!

error: Content is protected !!