ಸಂಜೆ ಆಗ್ತಿದ್ದಂತೆ ಬಿಸಿಬಿಸಿಯಾದ ತಿಂಡಿ ತಿನ್ನುವುದೇ ಒಂದು ಖುಷಿ. ಇಂಥ ಸಮಯದಲ್ಲಿ ಆರೋಗ್ಯಕ್ಕೂ ಒಳ್ಳೆಯದು, ರುಚಿಗೂ ತೃಪ್ತಿಕರವಾಗಿರುವ ತಿಂಡಿ ತಯಾರಿಸುವುದು ಒಂದು ಟಾಸ್ಕ್. ಅದಕ್ಕಾಗಿಯೇ ಇವತ್ತು ದೇಹಕ್ಕೆ ಪ್ರೋಟೀನ್, ಫೈಬರ್ ಹಾಗೂ ಶಕ್ತಿ ನೀಡುವ ಪೋಷಕಾಂಶಗಳಿಂದ ಕೂಡಿದ ಮೂಂಗ್ದಾಲ್ ನಗ್ಗೆಟ್ಸ್ ಮಾಡೋದು ಹೇಗೆ ಅಂತ ನೋಡೋಣ.
ಬೇಕಾಗುವ ಸಾಮಗ್ರಿಗಳು:
ಮೂಂಗ್ ದಾಲ್ ಅಥವಾ ಹೆಸರು ಬೇಳೆ – 1 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಹೆಚ್ಚಿದ ಈರುಳ್ಳಿ – ಅರ್ಧ
ಹೆಚ್ಚಿದ ಹಸಿರುಮೆಣಸಿನಕಾಯಿ – 2
ಹೆಚ್ಚಿದ ಕ್ಯಾರೆಟ್ – ಕಾಲು ಕಪ್
ಕರಿಬೇವು – 6ರಿಂದ 7 ಎಲೆ
ಬ್ರೆಡ್ ತುಂಡುಗಳು – 1 ಕಪ್
ಅಚ್ಚಖಾರದ ಪುಡಿ – 1 ಚಮಚ
ಪೆಪ್ಪರ್ ಪೌಡರ್ – ಕಾಲು ಚಮಚ
ಚಾಟ್ ಮಸಾಲ – ಅರ್ಧ ಚಮಚ
ಜೀರಿಗೆ – ಅರ್ಧ ಚಮಚ
ಜೋಳದ ಹಿಟ್ಟು – 2 ಚಮಚ
ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
ಮಾಡುವ ವಿಧಾನ:
ಮೊದಲು ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು 2-3 ಗಂಟೆಗಳ ಕಾಲ ನೆನೆಸಿಡಿ. ನಂತರ ಅದನ್ನು ಅರ್ಧದಷ್ಟು ಬೇಯಿಸಿ ತಣ್ಣಗಾಗಲು ಬಿಡಿ. ಬೇಯಿಸಿದ ಬೇಳೆಯ ಒಂದು ಭಾಗವನ್ನು ಬೇರ್ಪಡಿಸಿ ಇಟ್ಟುಕೊಂಡು, ಉಳಿದುದನ್ನು ಮಿಕ್ಸರ್ನಲ್ಲಿ ರುಬ್ಬಿಕೊಳ್ಳಿ. ಈಗ ಬಟ್ಟಲಿನಲ್ಲಿ ಈ ಮಿಶ್ರಣವನ್ನು ಹಾಕಿ, ಅದಕ್ಕೆ ಉಳಿದ ಬೇಳೆ, ತರಕಾರಿಗಳು, ಮಸಾಲೆಪುಡಿಗಳು, ಬ್ರೆಡ್ ತುಂಡುಗಳು ಹಾಗೂ ಜೋಳದ ಹಿಟ್ಟು ಸೇರಿಸಿ ಚೆನ್ನಾಗಿ ಕಲಸಿ ಹಿಟ್ಟು ತಯಾರಿಸಿ.
ಈ ಹಿಟ್ಟಿನಿಂದ ಚಿಕ್ಕ ಚಿಕ್ಕ ಆಕಾರಗಳಲ್ಲಿ ನಗ್ಗೆಟ್ಸ್ ತಯಾರಿಸಿ. ಏರ್ಫ್ರೈಯರ್ನಲ್ಲಿ 180 ಡಿಗ್ರಿ ತಾಪಮಾನದಲ್ಲಿ 15 ನಿಮಿಷ ಬೇಯಿಸಬಹುದು. ಅಥವಾ ಬಿಸಿ ಎಣ್ಣೆಯಲ್ಲಿ ಫ್ರೈ ಮಾಡಿದರೂ ನಿಮಗೆ ಸಿಗುತ್ತೆ ರುಚಿಕರ ನಗ್ಗೆಟ್ಸ್.