ಹೊಸದಿಗಂತ ವರದಿ ಮಡಿಕೇರಿ:
ಸರ್ಕಾರದ ಗ್ರಾಮ ಒನ್ ಯೋಜನೆಯನ್ನು ಜನರ ಸಮೀಪಕ್ಕೆ ತಲುಪಿಸುವಲ್ಲಿ ಮತ್ತಷ್ಟು ಪ್ರಯತ್ನ ಮಾಡಬೇಕು ಎಂದು ಇ-ಆಡಳಿತ ವಿಭಾಗದ ಸರ್ಕಾರದ ಕಾರ್ಯದರ್ಶಿ ವಿ.ಪೊನ್ನುರಾಜ್ ಅವರು ತಿಳಿಸಿದ್ದಾರೆ. ಗ್ರಾಮ ಒನ್ ಮತ್ತು ಸೇವಾ ಸಿಂಧು ಯೋಜನೆ ಪ್ರಗತಿ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
‘ಒಂದು ಊರು, ಸೇವೆಗಳು ಹಲವಾರು’ ಹೆಸರಿನಡಿ ಸರ್ಕಾರವು ಗ್ರಾಮ ಒನ್ ಯೋಜನೆ ಜಾರಿಗೊಳಿಸಿದೆ. ಆ ನಿಟ್ಟಿನಲ್ಲಿ ಹಲವು ಇಲಾಖೆಗಳ ಸೇವೆಗಳು ಸಕಾಲದಲ್ಲಿ ದೊರೆಯಬೇಕು. ಸರ್ಕಾರದ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಿಸಲು ಶ್ರಮಿಸಬೇಕು ಎಂದು ಅವರು ಹೇಳಿದರು. ಗ್ರಾಮ ಒನ್ ಯೋಜನೆಗೆ ಹಲವು ಇಲಾಖೆಗಳ ಮತ್ತಷ್ಟು ಸೇವೆಯನ್ನು ಸೇರ್ಪಡೆ ಮಾಡುವಲ್ಲಿ ಮುಂದಾಗಲಾಗಿದೆ. ಆ ದಿಸೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಗ್ರಾಮ ಒನ್ ಯೋಜನೆಯು ಸರ್ಕಾರದ ಅತ್ಯಂತ ಮಹತ್ವಾಂಕಾಕ್ಷೆಯ ನಾಗರಿಕ ಸ್ನೇಹಿ ಕಾರ್ಯಕ್ರಮವಾಗಿದೆ. ಒಂದೇ ಸೂರಿನಡಿ ಎಲ್ಲಾ ಇಲಾಖೆಗಳ ಸೇವೆಗಳನ್ನು ಗ್ರಾಮೀಣ ನಾಗರಿಕರಿಗೆ ಅವರ ಸ್ವಂತ ಗ್ರಾಮ ಪಂಚಾಯತ್ ಮಟ್ಟದಲ್ಲಿ ತಲುಪಿಸುವ ಗುರಿ ಹೊಂದಲಾಗಿದೆ ಎಂದು ಸರ್ಕಾರದ ಕಾರ್ಯದರ್ಶಿ ವಿ.ಪೊನ್ನುರಾಜ್ ನುಡಿದರು.
ಗ್ರಾಮ ಒನ್ ಸೆಂಟರ್‌ಗಳು ಕ್ರಿಯಾಶೀಲ ಹಾಗೂ ಜನರಿಗೆ ಹತ್ತಿರವಾಗಿ ಕೆಲಸ ಮಾಡಬೇಕು. ಗ್ರಾಮ ಒನ್ ಸೆಂಟರ್‌ಗಳನ್ನು ಮತ್ತಷ್ಟು ಬಲಪಡಿಸುವಲ್ಲಿ ಏನು ಮಾಡಬಹುದು ಎಂಬ ಬಗ್ಗೆ ಮಾಹಿತಿ ಪಡೆದರು. ತಮ್ಮ ತಮ್ಮ ಇಲಾಖೆಗಳಲ್ಲಿ ಸರ್ಕಾರದ ಸೇವೆಗಳನ್ನು ಕಾಲಮಿತಿಯಲ್ಲಿ ಒದಗಿಸಬೇಕು. ಆ ನಿಟ್ಟಿನಲ್ಲಿ ಗ್ರಾಮ ಒನ್ ಕೇಂದ್ರಗಳ ಮೂಲಕ ಗ್ರಾಮ ಮಟ್ಟದಲ್ಲಿ ಹೆಚ್ಚು ಸೇವೆಗಳನ್ನು ಸ್ಥಳೀಯರಿಗೆ ಕಲ್ಪಿಸಲು ಶ್ರಮಿಸಬೇಕು ಎಂದರು. ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು, ಜಿಲ್ಲೆಯಲ್ಲಿ 104 ಗ್ರಾಮ ಪಂಚಾಯತಿಗಳು ಇದ್ದು, 98 ಗ್ರಾಮ ಪಂಚಾಯತ್‌ಗಳಲ್ಲಿ ಈಗಾಗಲೇ ಗ್ರಾಮ ಒನ್ ಸೇವೆ ಕಲ್ಪಿಸಲಾಗಿದೆ. ಬಾಕಿ ಗ್ರಾಮ ಪಂಚಾಯತ್‌ಗಳಲ್ಲಿ ಗ್ರಾಮ ಒನ್ ಕೇಂದ್ರ ಆರಂಭಿಸಲು ಅರ್ಜಿ ಆಹ್ವಾನಿಸಲಾಗಿದೆ ಎಂದರು.
ಸೇವಾ ಸಿಂಧು, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ, ಆಧಾರ್, ಪ್ರಾದೇಶಿಕ ಸಾರಿಗೆ, ಇ-ಸ್ಟಾಂಪ್ ಸೇರಿದಂತೆ ಇದುವರೆಗೆ ಸುಮಾರು 13,991 ಸೇವೆಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು. ಗ್ರಾಮ ಒನ್ ಸೆಂಟರ್‌ಗಳು ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಕರ್ತವ್ಯ ನಿರ್ವಹಿಸಲಿವೆ. ಗ್ರಾಮ ಒನ್ ಸೆಂಟರ್‌ಗಳಿಗೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಒಂದು ಕೊಠಡಿ ನೀಡಿದರೆ ಕಾರ್ಯನಿರ್ವಹಣೆಗೆ ಸಹಕಾರಿ ಆಗಲಿದೆ ಎಂದರು.
ಈ ಕುರಿತು ಪ್ರತಿಕ್ರಿಯಿಸಿದ ಇ ಆಡಳಿತ ವಿಭಾಗದ ಸರ್ಕಾರದ ಕಾರ್ಯದರ್ಶಿ ಪೊನ್ನುರಾಜ್ ಅವರು, ಈ ಬಗ್ಗೆ ಪ್ರಸ್ತಾವನೆ ಕಳಿಸುವಂತೆ ಸಲಹೆ ಮಾಡಿದರು. ಗ್ರಾಮ ಒನ್ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಂಚೈಸಿಗಳು ಪಡಿತರ ಚೀಟಿ, ಪಾನ್ ಕಾರ್ಡ್, ಮ್ಯೂಟೇಷನ್ ಪ್ರತಿ ಹೀಗೆ ಹಲವು ಸೇವೆಗಳನ್ನು ಸೇರ್ಪಡೆ ಮಾಡಬಹುದಾಗಿದೆ ಎಂದು ಗಮನಕ್ಕೆ ತಂದರು.
ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ ಅವರು, ಗ್ರಾಮ ಒನ್ ಯೋಜನೆಯ ಮೂಲಕ ನಾಗರಿಕರ ಮನೆ ಬಳಿಯೇ ಸೇವಾ ಸಿಂಧು ವೇದಿಕೆಯ ಮೂಲಕ ಹಲವು ಸೇವೆಗಳು ಲಭ್ಯವಾಗಲಿವೆ ಎಂದು ತಿಳಿಸಿದರು.