ಹೊಸದಿಗಂತ ಡಿಜಿಟಲ್ ಡೆಸ್ಕ್:
ಡೆಲ್ಟಾ ಏರ್‌ಲೈನ್ಸ್‌ವೊಂದರ ವಿಮಾನದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ತುರ್ತಾಗಿ ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿರುವ ಘಟನೆ ನಡೆದಿದೆ. ಘಟನೆ ಶನಿವಾರ ಸಂಭವಿಸಿದ್ದು, ಅಟ್ಲಾಂಟಾಗೆ ತೆರಳಬೇಕಿದ್ದ ಈ ವಿಮಾನವು ಹಾರಾಟದ ಕೆಲವು ನಿಮಿಷಗಳಲ್ಲೇ ತೊಂದರೆಗೆ ಒಳಗಾಯಿತು.
ಲಾಸ್ ಏಂಜಲೀಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ ಹೊರಟು ಕೆಲವೇ ಹೊತ್ತಿನಲ್ಲಿ ವಿಮಾನದ ಎಡಭಾಗದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ತಾಂತ್ರಿಕತೆಯನ್ನು ಗಮನಿಸಿದ ಸಿಬ್ಬಂದಿ ತುರ್ತು ನಿರ್ಧಾರ ಕೈಗೊಂಡರು. ಸುಮಾರು 25 ವರ್ಷ ಹಳೆಯದಾದ ಈ ವಿಮಾನದಲ್ಲಿ 190ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ವಿಮಾನವನ್ನು ಸುರಕ್ಷಿತವಾಗಿ ನೆಲಕ್ಕಿಳಿಸಲು ನಿಖರವಾಗಿ ಕಾರ್ಯನಿರ್ವಹಿಸಿದ ಪೈಲಟ್ ಹಾಗೂ ಸಿಬ್ಬಂದಿಯ ಕಾರ್ಯಕ್ಷಮತೆಗೆ ಪ್ರಯಾಣಿಕರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ವಿಮಾನದಲ್ಲಿ ಇದ್ದ ಎಲ್ಲ ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಲಾಸ್ ಏಂಜಲೀಸ್ ವಿಮಾನ ನಿಲ್ದಾಣದ ಅಧಿಕೃತ ಮೂಲಗಳು ಖಚಿತಪಡಿಸಿವೆ.
ಘಟನೆಯ ನಂತರ ವಿಮಾನ ನಿಲ್ದಾಣದಲ್ಲಿ ಕೆಲಕಾಲ ಗೊಂದಲದ ಪರಿಸ್ಥಿತಿ ಉಂಟಾದರೂ, ತುರ್ತು ಸ್ಪಂದನಾ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಅಗತ್ಯ ಕ್ರಮ ಕೈಗೊಂಡಿದ್ದಾರೆ.