ಗಾಜಾ ಪಟ್ಟಿಯಲ್ಲಿ ಶಾಶ್ವತ ಕದನ ವಿರಾಮಕ್ಕೆ ಒತ್ತಾಯ: ವಿಶ್ವಸಂಸ್ಥೆಯ ನಿರ್ಣಯದ ಪರ ಭಾರತ ಮತ!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಯುದ್ಧಪೀಡಿತ ಗಾಜಾ ಪಟ್ಟಿಯಲ್ಲಿ ಶಾಶ್ವತ ಕದನ ವಿರಾಮಕ್ಕೆ ಆಗ್ರಹಿಸಿ ವಿಶ್ವಸಂಸ್ಥೆಯ ಮಹಾಧಿವೇಶನದ ನಿರ್ಣಯವನ್ನು ಬೆಂಬಲಿಸಿ ಭಾರತ ಮತ ಹಾಕಿದೆ. ಈ ಮೂಲಕ ಭಾರತವು ಈ ಪ್ರಸ್ತಾಪದ ಪರವಾಗಿ ಮತ ಹಾಕಿದ ಇತರ 157 ರಾಷ್ಟ್ರಗಳೊಂದಿಗೆ ಸೇರಿಕೊಂಡಿದೆ.

ಗಾಜಾದಲ್ಲಿ ಕದನ ವಿರಾಮಕ್ಕೆ ಕರೆ ನೀಡುವ ಹಾಗೂ ಇಸ್ರೇಲ್ ನಿಷೇಧಿಸಿರುವ ಪ್ಯಾಲೆಸ್ಟೈನ್ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯ ಸಂಸ್ಥೆಯನ್ನು (ಯುಎನ್ಆರ್ ಡಬ್ಲ್ಯೂಎ) ಬೆಂಬಲಿಸುವ ಈ ಎರಡು ನಿರ್ಣಯಗಳನ್ನು ಯುಎನ್​ಜಿಎ ಬುಧವಾರ ಬಹುಮತದಿಂದ ಅಂಗೀಕರಿಸಿತು.

ಅಮೆರಿಕ, ಇಸ್ರೇಲ್, ಅರ್ಜೆಂಟೀನಾ, ಜೆಕಿಯಾ, ಹಂಗೇರಿ, ನೌರು, ಪಪುವಾ ನ್ಯೂ ಗಿನಿಯಾ, ಪರಾಗ್ವೆ ಮತ್ತು ಟೋಂಗಾ ಸೇರಿದಂತೆ ಒಂಬತ್ತು ದೇಶಗಳು ಕದನ ವಿರಾಮದ ವಿರುದ್ಧವಾಗಿ ಮತ್ತು 13 ದೇಶಗಳು ಗೈರು ಹಾಜರಾಗಿವೆ. ಕದನ ವಿರಾಮದ ಪರವಾಗಿ ಒಟ್ಟು 158 ಮತಗಳು ಬಂದಿವೆ.

ಯುಎನ್ಆರ್ ಡಬ್ಲ್ಯೂಎ ನಿಷೇಧವನ್ನು ಹಿಂಪಡೆಯಬೇಕೆಂಬ ಎರಡನೇ ನಿರ್ಣಯದ ಪರವಾಗಿ 159 ಮತ, ವಿರುದ್ಧವಾಗಿ ಒಂಬತ್ತು ಮತಗಳು ಚಲಾವಣೆಯಾದವು. 11 ದೇಶಗಳು ಮತದಾನದಿಂದ ಹೊರಗುಳಿದವು.

193 ಸದಸ್ಯರ ಸಾಮಾನ್ಯ ಸಭೆಯಲ್ಲಿ ಎರಡು ದಿನಗಳ ಚರ್ಚೆಯ ನಂತರ ಈ ನಿರ್ಣಯಗಳನ್ನು ಮಂಡಿಸಲಾಗಿದೆ. ಇಸ್ರೇಲ್ ಮತ್ತು ಹಮಾಸ್ ನಡುವಿನ 14 ತಿಂಗಳ ಸುದೀರ್ಘ ಸಂಘರ್ಷವನ್ನು ಕೊನೆಗೊಳಿಸುವುದು ಅಗತ್ಯ ಎಂದು ರಾಷ್ಟ್ರಗಳು ಹೇಳಿದವು. ಹೆಚ್ಚುತ್ತಿರುವ ಬಿಕ್ಕಟ್ಟನ್ನು ಪರಿಹರಿಸಲು ಗಾಜಾದಲ್ಲಿ ಅಡೆತಡೆಯಿಲ್ಲದೆ ಪರಿಹಾರ ಸಾಮಗ್ರಿಗಳ ಪೂರೈಕೆಗೆ ಅನುವು ಮಾಡಿಕೊಡುವಂತೆ ಪ್ರತಿನಿಧಿಗಳು ಕರೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!