Friday, August 29, 2025

ಲಂಚಕ್ಕೆ ಬೇಡಿಕೆ: ಪುತ್ತೂರು ತಹಶೀಲ್ದಾರ್ ಕಚೇರಿ ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಹೊಸದಿಗಂತ ವರದಿ,ಪುತ್ತೂರು:

ಪುತ್ತೂರು ತಾಲೂಕಿನ ಆಡಳಿತ ಸೌಧದಲ್ಲಿರುವ ತಹಶೀಲ್ದಾರ್ ಕಚೇರಿಯ ಭೂ ಸುಧಾರಣಾ ಶಾಖೆಯ ಎಫ್.ಡಿ.ಎ ಸುನೀಲ್, ದೂರುದಾರರಿಂದ 12,000 ಲಂಚ ಸ್ವೀಕರಿಸುತ್ತಿದ್ದ ವೇಳೆ ಮಂಗಳೂರು ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಆಗಸ್ಟ್ 28ರಂದು ದಾಳಿ ನಡೆಸಿದ್ದು,ಈ ವೇಳೆ ಸುನೀಲ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಪುತ್ತೂರು ತಹಶೀಲ್ದಾ‌ರ್ ಕುಡಲಗಿ ಪರಾರಿಯಾಗಿದ್ದು, ಆತನಿಗಾಗಿ ಬಲೆ ಬೀಸಲಾಗಿದೆ.

ಪ್ರಕರಣದ ಹಿನ್ನೆಲೆ

ದೂರುದಾರರ ಚಿಕ್ಕಪ್ಪನವರಿಗೆ ಸೇರಿದ 65 ಸೆಂಟ್ಸ್ ಜಮೀನು ಅಕ್ರಮ ಸಕ್ರಮದನ್ವಯ ಮಂಜೂರಾಗಿದ್ದು, ನಂತರ ಅವರು ವೀಲುನಾಮೆ ಮೂಲಕ ದೂರುದಾರರಿಗೆ ಹಕ್ಕು ಬರೆಸಿಕೊಟ್ಟಿದ್ದರು.

ಜಾಗವನ್ನು ಪರಭಾರೆ ಮಾಡಲು ತಹಶೀಲ್ದಾರ್ ನಿರಾಕ್ಷೇಪಣಾ ಪತ್ರ ಅವಶ್ಯಕವಾಗಿದ್ದರಿಂದ, 2024ರ ಡಿಸೆಂಬರ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ಬಾಕಿ ಇರುವುದರಿಂದ ವಿಚಾರಿಸಿದಾಗ, ಕೇಸ್ ವರ್ಕರ್ (ಎಫ್.ಡಿ.ಎ) ಸುನೀಲ್‌ ತಹಶೀಲ್ದಾರರ ಸಹಿಗೆ ಲಂಚ ಅವಶ್ಯಕ ಎಂದು ಹೇಳಿ ಹಣ ಬೇಡಿಕೆ ಇಟ್ಟಿದ್ದರು.

ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ, ಸೂಚನೆಯಂತೆ ದಾಳಿ ನಡೆಸಿ ಸುನೀಲ್ 12,000 ಲಂಚ ಸ್ವೀಕರಿಸುವ ವೇಳೆ ಬಲೆಗೆ ಬಿದ್ದರು. ತಹಶೀಲ್ದಾರ್ ಕುಡಲಗಿ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಅವರ ಪಾತ್ರದ ಕುರಿತು ತನಿಖೆ ನಡೆಯಲಿದೆ.

ಇದನ್ನೂ ಓದಿ