ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಕ್ಷಣಕ್ಷಣಕ್ಕೂ ಹೇಳಿಕೆ ಬದಲಾಯಿಸುತ್ತಾ ಗೊಂದಲ ಸೃಷ್ಟಿಸುತ್ತಿರುವ ಸುಜಾತ ಭಟ್ ಬೆಂಗಳೂರಿನ ನಿವಾಸಕ್ಕೆ ಪೊಲೀಸ್ ಭದ್ರತೆ ನೀಡಲಾಗಿದೆ.
ತನ್ನ ಮನೆಯ ಬಳಿ ಸಾರ್ವಜನಿಕರು, ಮಾಧ್ಯಮದವರು ಬಾರದಂತೆ ನಿರ್ಬಂಧ ಹೇರಬೇಕು ಎಂಬ ಅವರ ಮನವಿ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಈಗಾಗಲೇ ವಿಚಾರಣೆಗೆ ಹಾಜರಾಗುವಂತೆ ಸುಜಾತ ಭಟ್ ಅವರಿಗೆ ಬಿಎನ್‌ಎಸ್ 131ಸೆಕ್ಷನ್‌ನಡಿ ಎಸ್‌ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಆದರೆ ಅನಾರೋಗ್ಯದ ಕಾರಣ ನೀಡಿ ಸುಜಾತಾ ವಿಚಾರಣೆಗೆ ಹಾಜರಾಗಿಲ್ಲ. ಇದೆಲ್ಲದರ ನಡುವೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಅವರ ನಿವಾಸದ ಸುತ್ತ ಭದ್ರತೆ ಒದಗಿಸಿದ್ದಾರೆ.
ಸುಜಾತ ಭಟ್ ಕಳೆದ ಮೂರು ವರ್ಷಗಳಿಂದ ಇಲ್ಲಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸಿಸುತ್ತಿದ್ದಾರೆ. ಧರ್ಮಸ್ಥಳ ಸಮಾಧಿ ಶೋಧ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ರಚನೆಯಾದ ಸಂದರ್ಭ ಆಗಮಿಸಿದ್ದ ಅವರು, ಆರಂಭದಲ್ಲಿ ತನ್ನ ಮಗಳು ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಧರ್ಮಸ್ಥಳದಿಂದ ನಾಪತ್ತೆಯಾಗಿದ್ದಾಳೆ. ಅವಳ ಅಸ್ಥಿ ಸಿಕ್ಕಿದರೆ ಕೊಡಿ ಎಂದು ದೂರು ನೀಡುವ ಮೂಲಕ ಹೊಸ ಟ್ವಿಸ್ಟ್ ನೀಡಿದ್ದರು. ಅದಾದ ಬಳಿಕ ಅನನ್ಯಾ ಭಟ್ ನನ್ನ ಮಗಳಲ್ಲ. ನಾನು ಆಸ್ತಿ ವಿಚಾರಕ್ಕೆ ಸಂಬಂಧಿಸಿ ಕಥೆ ಕಟ್ಟಿದ್ದೇನೆ ಎಂದು ಹೇಳಿಕೊಂಡಿದ್ದರು. ಈ ಹೇಳಿಕೆಯ ಬೆನ್ನಲ್ಲೇ ಉಲ್ಟಾ ಹೊಡೆದು ನನ್ನ ಬಳಿ ಬಲವಂತವಾಗಿ ಹೀಗೆ ಹೇಳಿಸಲಾಗಿದೆ ಎಂಬ ಹೇಳಿಕೆ ನೀಡಿದ್ದರು.
ಬಿಎನ್‌ಎಸ್ ಕಾಯ್ದೆ ಪ್ರಕಾರ ದೂರುದಾರರು ಅಥವಾ ಸಾಕ್ಷಿದಾರರು 60 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಅಥವಾ 18 ವರ್ಷದ ಒಳಗಿನವರಾಗಿದ್ದರೆ ತನಿಖಾಧಿಕಾರಿಗಳು ಅವರ ನಿವಾಸಕ್ಕೆ ತೆರಳಿ ಹೇಳಿಕೆ ದಾಖಲಿಸಿಕೊಳ್ಳಲು ಅವಕಾಶವಿರುವ ಹಿನ್ನೆಲೆಯಲ್ಲಿ ಎಸ್‌ಐಟಿ ಕೂಡಾ ಮಾಹಿತಿ ಪಡೆಯಲು ಅವರ ಮನೆಗೆ ಭೇಟಿ ನೀಡುವ ಸಾಧ್ಯತೆ ಕಂಡುಬಂದಿದೆ.