ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ತಾಜ್ ಹೊಟೇಲ್ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ತಹಾವ್ವುರ್ ರಾಣಾನ ವಿಚಾರಣೆ ಸತತ ಎರಡನೇ ದಿನದಿಂದ ನಡೆಯುತ್ತಿದ್ದು, ಭದ್ರತಾ ಸಿಬ್ಬಂದಿ ದಿನದ 24 ಗಂಟೆಯೂ ಕಾವಲು ಕಾಯುತ್ತಿದ್ದಾರೆ.
ಇತ್ತ ತಹಾವ್ವುರ್ ರಾಣಾ ಕುರಾನ್ ಪ್ರತಿಯನ್ನು ಕೇಳಿದ್ದಾನೆ. ಹೀಗಾಗಿ ಅದನ್ನು ನೀಡಲಾಗಿದ್ದು, ತನ್ನ ಸೆಲ್‌ನಲ್ಲಿ ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದಾನೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕುರಾನ್ ಜೊತೆಗೆ ರಾಣಾ ಪೆನ್ನು ಮತ್ತು ಕಾಗದವನ್ನು ಕೇಳಿದ್ದು, ಅವುಗಳನ್ನು ಒದಗಿಸಲಾಗಿದೆ. ಆದರೂ ತನಗೆ ಹಾನಿ ಮಾಡಿಕೊಳ್ಳಲು ಪೆನ್ನು ಬಳಸದಂತೆ ನೋಡಿಕೊಳ್ಳಲು ಅಧಿಕಾರಿಗಳ ನಿಗಾದಲ್ಲಿ ಇರಿಸಲಾಗಿದೆ. ಅದನ್ನು ಮೀರಿ ಆತ ಬೇರೆ ಯಾವುದೇ ಬೇಡಿಕೆಗಳನ್ನು ಇಟ್ಟಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.
ದೆಹಲಿ ಕಾನೂನು ಸೇವೆಗಳ ಪ್ರಾಧಿಕಾರ (DLSA) ಒದಗಿಸಿರುವ ವಕೀಲರನ್ನು ಪ್ರತಿ ದಿನ ಭೇಟಿ ಮಾಡಲು ರಾಣಾಗೆ ಅನುಮತಿ ನೀಡಲಾಗುತ್ತಿದೆ. ಇದರೊಂದಿಗೆ ಪ್ರತಿ 48 ಗಂಟೆಗಳಿಗೊಮ್ಮೆ ಆತನ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಉಳಿದಂತೆ ಬಂಧಿತ ಇತರ ವ್ಯಕ್ತಿಗಳನ್ನು ನೋಡಿಕೊಳ್ಳುವಂತೆಯೇ ಆತನನ್ನೂ ನಡೆಸಿಕೊಳ್ಳಲಾಗುತ್ತಿದೆ ಎಂದು ಮತ್ತೊಬ್ಬ ಅಧಿಕಾರಿ ದೃಢಪಡಿಸಿದ್ದಾರೆ.
ಅಮೆರಿಕದಿಂದ ಭಾರತಕ್ಕೆ ರಾಣಾನನ್ನು ಕರೆದುಕೊಂಡು ಬಂದ ಬಳಿಕ ದೆಹಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ವಿಚಾರಣೆಗಾಗಿ ಆತನನ್ನು ತನಿಖಾ ಸಂಸ್ಥೆಗೆ 18 ದಿನಗಳ ಕಸ್ಟಡಿಗೆ ಒಪ್ಪಿಸಲಾಗಿದೆ.