ಹೊಸದಿಗಂತ ವರದಿ, ಮೈಸೂರು:
ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ವಿರೋಧಿಸಿ ಬುಧವಾರದಿಂದ ಕಾವೇರಿ ಕ್ರಿಯಾ ಸಮಿತಿ ವತಿಯಿಂದ ಮತ್ತೆ ಹೋರಾಟ ಆರಂಭಿಸಿದ್ದು, ಸರ್ಕಾರದ ಕ್ರಮ ಖಂಡಿಸಿ ದೊಡ್ಡ ಗಡಿಯಾರದ ಬಳಿ ಧರಣಿ ಸತ್ಯಾಗ್ರಹ ನಡೆಸಲಾಯಿತು.
ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೋರಾಟಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕಾವೇರಿ ನೀರಿನ ವಿಚಾರದಲ್ಲಿ ನಿರಂತರವಾಗಿ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗುತ್ತಲೇ ಇದೆ. ನ್ಯಾಯ ದೊರಕಿಸಿಕೊಡುವ ಇಚ್ಚಾ ಶಕ್ತಿ ಕೇಂದ್ರ ಸರ್ಕಾರಗಳಿಗೆ ಇಲ್ಲವಾಗಿದೆ. 1974ರಲ್ಲಿ ತಮಿಳುನಾಡು-ಕರ್ನಾಟಕದ ನಡುವೆ ನಡೆದಿದ್ದ ಕಾವೇರಿ ನೀರಿನ ಒಪ್ಪಂದ ರದ್ದಾಗಬೇಕಿತ್ತು, ಆದರೆ ಅನ್ನು ಮುಂದುವರಿಸಿಕೊoಡು ಬರಲಾಯಿತು. ಒಪ್ಪಂದವನ್ನು ರದ್ದುಪಡಿಸುವ ಇಚ್ಚಾ ಶಕ್ತಿಯನ್ನು ರಾಜ್ಯ ಸರ್ಕಾರಗಳು ಮಾಡಲಿಲ್ಲ. ಹಾಗಾಗಿ ರಾಜ್ಯದ ರಾಜಕೀಯ ನಾಯಕರಿಂದಲೆ ಕರ್ನಾಟಕಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ಕಾವೇರಿ ಕ್ರಿಯಾ ಸಮಿತಿಯ ಅಧ್ಯಕ್ಷರಾದ ಚಿತ್ರ ನಟ ಎಸ್.ಜಯಪ್ರಕಾಶ್ ಮಾತನಾಡಿ,ತಮಿಳುನಾಡಿಗೆ ಮತ್ತೆ ನಿತ್ಯವೂ ನೀರು ಬಿಡಬೇಕೆಂದು ಕಾವೇರಿ ನ್ಯಾಯಮಂಡಳಿ ಆದೇಶ ನೀಡಿರುವುದು ಖಂಡನೀಯ. ರಾಜ್ಯದಲ್ಲಿ ಸೂಕ್ತ ಮಳೆಯಾಗದೆ ಜಲಾಶಯಗಳು ಬರಿದಾಗಿದ್ದು, ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ರೈತರ ಬೆಳೆಗೇ ನೀರು ಬಿಟ್ಟಿಲ್ಲ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಬೇಕೆಂದು ಆದೇಶ ನೀಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರವಾಹದಿಂದ ತಮಿಳುನಾಡು ಮುಳುಗಿದ್ದರೂ ಅವರ ನೀರಿನ ಹಾಹಾಕಾರ ನಿಂತಿಲ್ಲ. ಅಲ್ಲದೆ ನಮ್ಮ ರಾಜ್ಯ ಸರ್ಕಾರ ನ್ಯಾಯಾ
ಲಯದಲ್ಲಿ ಸಮರ್ಥವಾಗಿ ವಾದ ಮಂಡನೆ ಮಾಡಲು ವಿಫಲವಾಗಿದೆ. ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಲು ಸಾಧ್ಯವಾಗಿಲ್ಲ. ಇದರಿಂದ ರಾಜ್ಯದ ಜನತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಹೀಗಾಗಿ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಕನ್ನಡಪರ ಹೋರಾಟಗಾರ ಮೂಗೂರು ನಂಜುoಡಸ್ವಾಮಿ, ಬಸವರಾಜು, ಮಹದೇವಪ್ಪ, ಮಹದೇವಸ್ವಾಮಿ, ಚಿನ್ನಸ್ವಾಮಿ, ಶಿವಪ್ಪ ದೇವರು, ಪ್ರಭಾ, ಅಲ್ಲಮ್ಮ, ಮೆಲ್ಲಹಳ್ಳಿ ಮಹಾದೇವಸ್ವಾಮಿ, ಸುಭಾಶ್ರೀ, ಶ್ರೀನಿವಾಸ್, ಪುಷ್ಪ, ಹನುಮಂತೇಗೌಡ, ಮಹೇಶ್ ಗೌಡ, ಮಂಜುಳಾ, ಡಾ. ರಾಜಕುಮಾರ್ ಸಂಘದ ಅಧ್ಯಕ್ಷ ಮಹದೇವಸ್ವಾಮಿ, ಡಿ. ಮಹೇಶ್ ನಾಯಕ್, ಸಿದ್ದಮ್ಮ, ರೂಪಾದೇವಿ ಸೇರಿದಂತೆ, ವಿದ್ಯಾವರ್ಧಕ ಕಾಲೇಜಿನ ವಿದ್ಯಾರ್ಥಿಗಳು, ಅನೇಕರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದರು, ಇದಕ್ಕೂ ಮುನ್ನಾ ವಿಶ್ವ ವಿಖ್ಯಾತ ಮೈಸೂರು ದಸರಾದ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿಯನ್ನು ಎಂಟು ಬಾರಿ ಹೊತ್ತಿದ್ದ ಗಜಪಡೆಯ ಮಾಜಿ ಕ್ಯಾಪ್ಟನ್ ಅರ್ಜುನ ಆನೆಯ ಸಾವಿಗೆ ಎರಡು ನಿಮಿಷಗಳ ಕಾಲ ಮೌನ ಆಚರಣೆ ಮಾಡುವ ಮೂಲಕ ಶ್ರದ್ದಾಂಜಲಿಯನ್ನು ಸಲ್ಲಿಸಲಾಯಿತು.