ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಒತ್ತಾಯಿಸಿ ನ.10ರಂದು ಹೆದ್ದಾರಿ ತಡೆದು ಪ್ರತಿಭಟನೆ

ಹೊಸದಿಗಂತ ವರದಿ,ದಾವಣಗೆರೆ:

ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಹಾಗೂ ಲಿಂಗಾಯತ ಉಪ ಜಾತಿಗಳನ್ನು ಕೇಂದ್ರದ ಓಬಿಸಿ ಮೀಸಲಾತಿಗೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ನ.10ರಂದು ಇಲ್ಲಿನ ರಾಷ್ಟ್ರೀಯ ಹೆದ್ದಾರಿ ತಡೆದು, ಇಷ್ಟಲಿಂಗ ಪೂಜೆ ಮಾಡುವ ಮೂಲಕ ಪ್ರತಿಭಟಿಸುವುದಾಗಿ ಕೂಡಲ ಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರವು ಮೀಸಲಾತಿ ಘೋಷಣೆ ಮಾಡಿದ್ದರೂ, ಚುನಾವಣಾ ನೀತಿ ಸಂಹಿತೆಯಿಂದಾಗಿ 2ಡಿ ಮೀಸಲಾತಿ ಅನುಷ್ಠಾನಕ್ಕೆ ಬರಲಿಲ್ಲ. ಈಗಿನ ಕಾಂಗ್ರೆಸ್ ಸರ್ಕಾರದ ಮೇಲೆ ಪಂಚಮಸಾಲಿ ಸಮಾಜದ ಋಣ ಇದೆ. ಸರ್ಕಾರದ ಮನೆ ಬಾಗಿಲಿಗೆ ಹೋಗಿ ಕೇಳುವುದಕ್ಕಿಂತ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೋರಾಟ ಮಾಡಿ, ಇಷ್ಟಲಿಂಗ ಪೂಜೆ ಮೂಲಕ ಪ್ರತಿಭಟಿಸುವುದು ಲೇಸು ಅಂದುಕೊಂಡಿದ್ದೇವೆ ಎಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದು ಹಲವು ತಿಂಗಳಾಗಿವೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು ಇಷ್ಟಲಿಂಗ ಪೂಜೆ ಮೂಲಕ ಹೋರಾಟವನ್ನು ಮತ್ತೆ ಶುರು ಮಾಡಲಿದ್ದೇವೆ. ಸರ್ಕಾರವು ಗ್ಯಾರಂಟಿ ಯೋಜನೆಗಳ ಬಗ್ಗೆಯೇ ಯೋಚಿಸದೇ, ನಮ್ಮ ಸಮಾಜದ ಬೇಡಿಕೆಗಳಿಗೂ ಸ್ಪಂದಿಸಬೇಕು. ಇದಕ್ಕಾಗಿ ದಾವಣಗೆರೆಯಲ್ಲಿ ಹೋರಾಟ ನಡೆಸಲಿದ್ದು, ಜಿಲ್ಲಾದ್ಯಂತ ಪ್ರವಾಸ ಮಾಡುವ ಮೂಲಕ ಸಮಾಜ ಬಾಂಧವರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಅವರು ನುಡಿದರು.

ಕುರುಬ ಸಮಾಜವು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸುತ್ತಿದೆ. ನಮ್ಮ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹಾಗೂ ಲಿಂಗಾಯತ ಸಮಾಜದ ಒಳ ಪಂಗಡಗಳನ್ನು ಕೇಂದ್ರದ ಓಬಿಸಿ ಮೀಸಲಾತಿಗೆ ತರುವಂತೆ ಶಿಫಾರಸ್ಸು ಮಾಡಬೇಕೆಂಬುದು ನಮ್ಮ ಬೇಡಿಕೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಲೋಕಸಭೆ ಚುನಾವಣೆ ಬರಲಿದೆ. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಚುನಾವಣಾ ಫಲಿತಾಂಶದ ಮೇಲೂ ಪರಿಣಾಮ ಬೀರಲಿದೆ ಎಂದು ಅವರು ಸೂಚ್ಯವಾಗಿ ಎಚ್ಚರಿಸಿದರು.

2ಎ ಮೀಸಲಾತಿ ವಿಚಾರದಲ್ಲಿ ಜಯಪ್ರಕಾಶ ಹೆಗಡೆ ಮಧ್ಯಂತರ ವರದಿ ನಮ್ಮ ಪರವಾಗಿ ಬಂದಿದೆ. ಆದರೆ, ವರದಿಯನ್ನು ಸರ್ಕಾರಕ್ಕೆ ನೀಡದಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಪಂಚಮಸಾಲಿಗಳಿಗೆ ಮೀಸಲಾತಿ ನೀಡುವುದರಿಂದ ಈಗಾಗಲೇ 2ಎ ಪಟ್ಟಿಯಲ್ಲಿರುವ ಜಾತಿಗಳಿಗೆ ಅನ್ಯಾಯವಾಗುತ್ತದೆಂಬ ತಪ್ಪುಗ್ರಹಿಕೆ ಸರಿಯಲ್ಲ. ಯಾರಿಗೂ ಅನ್ಯಾಯವಾಗದಂತೆ ಮೀಸಲಾತಿ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಸರ್ಕಾರವು ಜಾತಿ ಗಣತಿ ವರದಿ ಬಿಡುಗಡೆ ಮಾಡಲು ಯಾವುದೇ ವಿರೋಧವೂ ಇಲ್ಲ. ಲಿಂಗಾಯತ, ಒಕ್ಕಲಿಗ ಸಮಾಜದ ಮುಖಂಡರು ಸ್ವಾಮೀಜಿಗಳನ್ನು ಸೇರಿಸಿ, ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿ. ಉಭಯ ಸಮಾಜದ ಶಾಸಕರ ಸಭೆ ಮಾಡಲಿ. ಸರ್ಕಾರದ ಸೌಲಭ್ಯ ತಪ್ಪುವ ಭೀತಿಯಲ್ಲಿ ಲಿಂಗಾಯತ ಒಳ ಪಂಗಡವರು ಲಿಂಗಾಯತ ಎಂಬುದಾಗಿ ಬರೆಸಿಲ್ಲ. ಇದರಿಂದ ಲಿಂಗಾಯತ ಸಮುದಾಯದ ಸಂಖ್ಯೆ ಕಡಿಮೆಯಾಗಿದೆ ಎಂಬುದು ನಮ್ಮ ಆತಂಕವಾಗಿದೆ. ಜಾತಿ ಗಣತಿ ಪ್ರಾಮಾಣಿಕವಾಗಿದ್ದು, ಎಲ್ಲಾ ಸಮುದಾಯಕ್ಕೂ ನ್ಯಾಯ ಸಿಗಬೇಕು ಎಂದು ಅವರು ಆಶಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!