ಹೊಸದಿಗಂತ ವರದಿ, ಹಾವೇರಿ :
ಇ ಸ್ವತ್ತು ಉತಾರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟು ಹಣ ಪಡೆಯುವಾಗಲೇ ಹಲಗೇರಿ ಪಿಡಿಒ, ಗ್ರಾಪಂ ಉಪಾಧ್ಯಕ್ಷ ಹಾಗೂ ಮೂವರು ಸದಸ್ಯರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ರಾಣೆಬೆನ್ನೂರ ತಾಲೂಕ ಹಗಗೇರಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
ಹಲಗೇರಿ ಗ್ರಾಪಂ ಪಿಡಿಓ ಕೆ.ಮಂಜುನಾಥ, ಹಲಗೇರಿ ಗ್ರಾ.ಪಂ ಉಪಾಧ್ಯಕ್ಷ ಮಲ್ಲಪ್ಪ ತಿರಕಪ್ಪ ಬೂದಿಹಾಳ, ಗ್ರಾ.ಪಂ ಸದಸ್ಯರಾದ ಸೋಮಶೇಖರ ಕನ್ನಪ್ಪಳವರ, ಪ್ರಸನ್ನ ಬಣಕಾರ ಮತ್ತು ಸೈಯ್ಯದ್ ರೆಹಮಾನ ಕರ್ಜಗಿ , ಭಾಷಾಸಾಬ ಲೋಕಾ ಬಲೆಗೆ ಬಿದ್ದವರು. ಎಲ್ಲಾ ಐದು ಜನರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಹಲಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ದೂರುದಾರ ರಾಣೆಬೆನ್ನೂರ ಶಹರದ ಮೃತ್ಯುಂಜಯನಗರದ ನಿವಾಸಿ ನವೀನ ಮಲ್ಲೇಶಪ್ಪ ಅಂದನೂರ ರಾಣೆಬೆನ್ನೂರ ತಾಲೂಕು ಹಲಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಿ.ಸ.ನಂ 241,2ಅ ಜಮೀನಿನನ್ನು ಎನ್.ಎ ಡೆವಲಪ್‌ಮೆಂಟ್ ಮಾಡಿಸಿ, ಒಟ್ಟು 124 ಪ್ಲಾಟ್‌ಗಳ ಪೈಕಿ 60 ಪ್ಲಾಟುಗಳ ಇ-ಸ್ವತ್ತು ಉತಾರಗಳನ್ನು ನೀಡಲು ಪಿ.ಡಿ.ಓ ಕೆ.ಮಂಜುನಾಥಗೆ ಮನವಿ ಮಾಡಿದ್ದರು. ಆಗ ಪಿಡಿಒ ಮಂಜುನಾಥ ರೂ.1ಲಕ್ಷ ಲಂಚದ ಹಣಕ್ಕೆ ಬೇಡಿಕೆ ಇಟ್ಟು ಪಡೆದುಕೊಂಡಿದ್ದರು.
ಬಾಕಿ ಉಳಿದ 64 ಪ್ಲಾಟುಗಳ ಇ-ಸ್ವತ್ತು ಉತಾರಗಳನ್ನು ಪೂರೈಸಲು ಹಲಗೇರಿ ಗ್ರಾ.ಪಂ.ಗೆ ಮನವಿ ಸಲ್ಲಿಸಿದಾಗ ಗ್ರಾಪಂ ಉಪಾಧ್ಯಕ್ಷ ಮತ್ತು ಸದಸ್ಯರು 4.50 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟು ನಂತರ ರೂ 4ಲಕ್ಷಗಳಿಗೆ ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನವೀನ ಮಲ್ಲೇಶಪ್ಪ ಅಂದನೂರ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಲೋಕಾಯುಕ್ತ ಪೊಲೀಸರ ನಿರ್ದೆಶನದಂತೆ ಸೋಮವಾರ ಗ್ರಾಪಂ ಕಚೇರಿಯಲ್ಲೇ ಹಲಗೇರಿ ಗ್ರಾಪಂ ಪಿಡಿಓ ಕೆ.ಮಂಜುನಾಥ ಸಹಿತ ಹಲಗೇರಿ ಗ್ರಾ.ಪಂ ಉಪಾಧ್ಯಕ್ಷ ಮಲ್ಲಪ್ಪ ತಿರಕಪ್ಪ ಬೂದಿಹಾಳ, ಗ್ರಾ.ಪಂ ಸದಸ್ಯರಾದ ಸೋಮಶೇಖರ ಕನ್ನಪ್ಪಳವರ, ಪ್ರಸನ್ನ ಬಣಕಾರ ಮತ್ತು ಸೈಯ್ಯದ್‌ರೆಹಮಾನ ಕರ್ಜಗಿ @ ಭಾಷಾಸಾಬ ಅವರು ಲಂಚದ ಹಣ ಸ್ವೀಕರಿಸುವ ವೇಳೆ ದಾಳಿ ನಡೆಸಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.
ಲೋಕಾಯುಕ್ತ ದಾಳಿಯು ಲೋಕಾ ಎಸ್ಪಿ ಎಂ. ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಕೈಗೊಂಡು, ಡಿವೈಎಸ್‌ಪಿ ಮಧುಸೂದನ, ನೇತೃತ್ವದಲ್ಲಿ ತನಿಖಾಧಿಕಾರಿಗಳಾದ ಬಸವರಾಜ ಹಳಬಣ್ಣನವರ ಮತ್ತು ಸಿಬ್ಬಂದಿಗಳಾದ ಸಿ.ಎಂ. ಬಾರ್ಕಿ, ಎಂ.ಕೆ. ನದಾಫ, ಟಿ. ಇ. ತಿರುಮಲೆ, ಬಿ. ಎಂ. ಕರ್ಜಗಿ, ಎಂ.ಕೆ. ಲಕ್ಷೇಶ್ವರ, ಆನಂದ ತಳಕಲ್ಲ, ಎಸ್. ಎನ್. ಕಡಕೋಳ, ಎಂ.ಬಿ. ಲಂಗೋಟಿ, ಆರ್. ವೈ. ಗೆಜ್ಜೆಹಳ್ಳಿ, ಶಿವರಾಜ ಲಿಂಗಮ್ಮನವರ, ಎಂ. ಎಸ್. ಕೊಂಬಳಿ, ನಿರಂಜನ ಪಾಟೀಲ, ಬಿ. ಎಸ್. ಸಂಕಣ್ಣನವರ, ಆನಂದ ಶೆಟ್ಟರ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ತನಿಖೆ ಮುಂದುವರೆದಿದೆ.