ಮರಣ ದೃಢೀಕರಣ ಪತ್ರ ನೀಡಲು ಲಂಚದ ಬೇಡಿಕೆ: ಗ್ರಾಮ ಕರಣಿಕ ಲೋಕಾಯುಕ್ತ ಬಲೆಗೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮರಣ ದೃಢೀಕರಣ ಪತ್ರ ನೀಡಲು ಲಂಚ ಸ್ವೀಕರಿಸಿದ ಚೇಳಾರು ಗ್ರಾಮ ಕರಣಿಕ ವಿಜಿತ್ ಎಂಬವರನ್ನು ಮಂಗಳೂರು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ಚೇಳಾರು ನಿವಾಸಿಯೋರ್ವರು ತನ್ನ ತಾಯಿಯ ಹೆಸರಿನಲ್ಲಿದ್ದ ಜಮೀನಿನಲ್ಲಿ 5 ಸೆಂಟ್ಸ್‌ನ್ನು ನೆರಮನೆಯವರಿಗೆ ಮಾರಾಟ ಮಾಡಲು ತೀರ್ಮಾನಿಸಿದ್ದರು. ಅದರ ದಾಖಲಾತಿಗಳನ್ನು ಸಿದ್ಧಪಡಿಸಿ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ವಿಚಾರಿಸಿದಾಗ ಅಜ್ಜನ ಮರಣ ಪ್ರಮಾಣಪತ್ರ ಮತ್ತು ಸಂತತಿ ನಕ್ಷೆ ಮಾಡಿಕೊಡು ಬರುವಂತೆ ತಿಳಿಸಿದ್ದರು. ಅದರಂತೆ ದೂರುದಾರರು ಸೆಪ್ಟೆಂಬರ್ ತಿಂಗಳಲ್ಲಿ ಗ್ರಾಮ ಕರಣಿಕರ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಿದ್ದರು. ಅನಂತರ ಎರಡು ಮೂರು ಬಾರಿ ಗ್ರಾಮ ಕರಣಿಕರ ಕಚೇರಿಗೆ ಹೋಗಿ ದೃಢೀಕರಣ ಪತ್ರದ ಬಗ್ಗೆ ವಿಚಾರಿಸಿದರೂ ಉತ್ತರ ನೀಡಿರಲಿಲ್ಲ. ನ.20ರಂದು ಗ್ರಾಮ ಕರಣಿಕರ ಮೊಬೈಲ್‌ಗೆ ಕರೆ ಮಾಡಿದಾಗ ‘ನಿಮ್ಮ ಅಜ್ಜನ ಮರಣದ ದೃಢೀಕರಣ ಪತ್ರ ಸಿದ್ಧವಾಗಿದೆ. ಗ್ರಾಕರಣಿಕರ ಕಚೇರಿಗೆ ಬನ್ನಿ. ಬರುವಾಗ 15000 ರೂ. ರೂ. ತೆಗೆದುಕೊಂಡು ಬನ್ನಿ ಎಂದು ತಿಳಿಸಿದ್ದರು. ಆದರೆ ಅಷ್ಟೊಂದು ಹಣ ಇಲ್ಲ ಎಂದು ದೂರುದಾರರು ತಿಳಿಸಿದಾಗ ‘ನಾಳೆಯಾದ್ರು ತಂದು ಕೊಡಿ’ ಎಂದು ಗ್ರಾಮಕರಣಿಕರು ಹೇಳಿದ್ದರು.

ನ.22ರಂದು ಹೋಗಿ ಮಾತನಾಡಿದಾಗ ಮರಣ ದೃಢೀಕರಣ ಪತ್ರ ಮಾಡಿಕೊಟ್ಟಿದ್ದಕ್ಕಾಗಿ 15,000 ರೂ.ಗಳನ್ನು ಸುರತ್ಕಲ್ ನಾಡಕಚೇರಿಗೆ ಬಂದು ಕೊಡುವಂತೆ ಲಂಚದ ಬೇಡಿಕೆ ಇಟ್ಟಿದ್ದರು. ಆಗ ದೂರುದಾರರು ಅದರಲ್ಲಿ ಸ್ವಲ್ಪ ಕಡಿಮೆ ಮಾಡುವಂತೆ ಹೇಳಿದಾಗ  13,೦೦೦ ರೂ. ನೀಡುವಂತೆ ಗ್ರಾಮ ಕರಣಿಕರು ಬೇಡಿಕೆ ಇಟ್ಟಿದ್ದರು. ಅನಂತರ 13,೦೦೦ ರೂ. ತೆಗೆದುಕೊಂಡು ಹೋಗಿದ್ದರು. ಅದನ್ನು ಗ್ರಾಮ ಕರಣಿಕ ವಿಜಿತ್ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧೀಕ್ಷಕ ಸಿ.ಎ.ಸೈಮನ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಉಪಾಧೀಕ್ಷಕ ಚಲುವರಾಜ್ ಬಿ., ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ ಎ., ಸುರೇಶ್ ಕಮಾರ್ ಪಿ. ಮತ್ತು ಲೋಕಾಯುಕ್ತ ಪೊಲೀಸ್ ಸಿಬಂದಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!