ಹೊಸದಿಗಂತ ಡಿಜಿಟಲ್ ಡೆಸ್ಕ್;
ಪಾಶ್ಚಿಮಾತ್ಯ ದೇಶಗಳಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತೊಮ್ಮೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ ಭಾಗಿಯಾಗಿದ್ದ ಜೈಶಂಕರ್, ಪ್ರಜಾಪ್ರಭುತ್ವವನ್ನು ಪಾಶ್ಚಾತ್ಯ ಗುಣಲಕ್ಷಣ ಎಂದು ಪಾಶ್ಚಾತ್ಯ ರಾಷ್ಟ್ರಗಳು ಪರಿಗಣಿಸುವುದನ್ನು ಟೀಕಿಸಿದ್ದಾರೆ.
ಪಾಶ್ಚತ್ಯ ದೇಶಗಳು ತಮ್ಮ ದೇಶದಲ್ಲಿ ಮೌಲ್ಯಯುತವಾಗಿರುವುದನ್ನು ವಿದೇಶದಲ್ಲಿ ಅಭ್ಯಾಸ ಮಾಡುತ್ತಿಲ್ಲ ಎಂದು ಜೈಶಂಕರ್ ಆರೋಪಿಸಿದ್ದಾರೆ.
ಮ್ಯೂನಿಚ್ ಭದ್ರತಾ ಸಮ್ಮೇಳನದಲ್ಲಿ “ಲೈವ್ ಟು ವೋಟ್ ಅನದರ್ ಡೇ: ಫೋರ್ಟಿಫೈಯಿಂಗ್ ಡೆಮಾಕ್ರಟಿಕ್ ರೆಸಿಲಿಯನ್ಸ್” ಎಂಬ ಶೀರ್ಷಿಕೆಯ ಪ್ಯಾನಲ್ ಚರ್ಚೆಯಲ್ಲಿ ಜೈಶಂಕರ್ ಶುಕ್ರವಾರ ಈ ಹೇಳಿಕೆಗಳನ್ನು ನೀಡಿದ್ದಾರೆ.
ಜರ್ಮನಿಯಲ್ಲಿ ಭಾರತದ ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ನೋಟವನ್ನು ಇಡೀ ಜಗತ್ತಿಗೆ ನೀಡಿದರು. ಜಾಗತಿಕವಾಗಿ ಪ್ರಜಾಪ್ರಭುತ್ವ ಅಪಾಯದಲ್ಲಿದೆಯೇ ಎಂದು ಕೇಳಿದಾಗ, ಅವರು ತಮ್ಮ ಶಾಯಿ ಹಚ್ಚಿದ ತೋರು ಬೆರಳನ್ನು ತೋರಿಸಿದರು. ನಮಗೆ ಪ್ರಜಾಪ್ರಭುತ್ವ ಕೇವಲ ಒಂದು ತತ್ವವಲ್ಲ, ಅದು ಈಡೇರಿಸಿದ ಭರವಸೆಯಾಗಿದೆ ಎಂದು ಬೆರಳು ತೋರಿಸಿ ಜೈಶಂಕರ್ ಹೇಳಿದರು.
‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂಬ ಪ್ರಶ್ನೆಯನ್ನು ಎತ್ತಿದ ಪಾಶ್ಚಿಮಾತ್ಯ ದೇಶಗಳಿಗೆ ಜೈಶಂಕರ್ ಕನ್ನಡಿ ಹಿಡಿದರು. ಗ್ಲೋಬಲ್ ಸೌತ್‌ನಲ್ಲಿ ಪಶ್ಚಿಮ ದೇಶಗಳು ಪ್ರಜಾಪ್ರಭುತ್ವ ಅಲ್ಲದ ಶಕ್ತಿಗಳನ್ನು ಪ್ರೋತ್ಸಾಹಿಸಿತು . ಪಾಶ್ಚಿಮಾತ್ಯ ದೇಶಗಳು ತಮ್ಮ ಪ್ರಜಾಪ್ರಭುತ್ವದ ಮಾದರಿಯನ್ನು ಪ್ರಪಂಚದ ಉಳಿದ ಭಾಗಗಳ ಮೇಲೆ ಹೇರುವಲ್ಲಿ ನಿರತವಾಗಿವೆ, ಅವರು ಪಶ್ಚಿಮದ ಹೊರಗೆ ಯಶಸ್ವಿ ಮಾದರಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ವಿದೇಶಾಂಗ ಸಚಿವರು ಹೇಳಿದರು.
ಪಶ್ಚಿಮ ದೇಶಗಳು ಪ್ರಜಾಪ್ರಭುತ್ವವನ್ನು ಪಾಶ್ಚಿಮಾತ್ಯ ಗುಣಲಕ್ಷಣವೆಂದು ಪರಿಗಣಿಸಿ ಜಾಗತಿಕ ದಕ್ಷಿಣದಲ್ಲಿ ಪ್ರಜಾಪ್ರಭುತ್ವೇತರ ಶಕ್ತಿಗಳನ್ನು ಪ್ರೋತ್ಸಾಹಿಸುವಲ್ಲಿ ನಿರತವಾಗಿದ್ದ ಕಾಲವಿತ್ತು, ಮತ್ತು ಅದು ಇನ್ನೂ ಹಾಗೆಯೇ ಇದೆ. ನಾನು ಹೇಳುತ್ತಿರುವುದೇನೆಂದರೆ, ಹಲವು ಸಂದರ್ಭಗಳಲ್ಲಿ, ನೀವು ಮನೆಯಲ್ಲಿ (ನಿಮ್ಮ ದೇಶದಲ್ಲಿ) ಏನ್ನು ಮೌಲ್ಯಯುತವೆಂದು ಹೇಳುತ್ತೀರೋ ಅದನ್ನು ವಿದೇಶದಲ್ಲಿ ಅನುಸರಿಸುವುದಿಲ್ಲ ಎಂಬ ಕೆಲವು ಇತ್ತೀಚಿನ ಪ್ರಕರಣಗಳನ್ನು ನಾನು ತೋರಿಸಬಲ್ಲೆ’ ಎಂದು ಅವರು ಹೇಳಿದರು.
ಭಾರತದಲ್ಲಿ ಚುನಾವಣೆಯ ಸಮಯದಲ್ಲಿ ಸುಮಾರು ಮೂರನೇ ಎರಡರಷ್ಟು ಮತದಾರರು ಮತ ಚಲಾಯಿಸುತ್ತಾರೆ. ಕಳೆದ ವರ್ಷ ನಾವು ರಾಷ್ಟ್ರೀಯ ಚುನಾವಣೆಗಳನ್ನು ನಡೆಸಿದ್ದೇವೆ, ಅದರಲ್ಲಿ 900 ಮಿಲಿಯನ್ ಮತದಾರರಲ್ಲಿ ಸುಮಾರು 700 ಮಿಲಿಯನ್ ಜನರು ಮತ ಚಲಾಯಿಸಿದ್ದಾರೆ. ಎಣಿಕೆ ಒಂದೇ ದಿನದಲ್ಲಿ ನಡೆಯುತ್ತದೆ ಮತ್ತು ಫಲಿತಾಂಶಗಳ ಬಗ್ಗೆ ಯಾವುದೇ ವಿವಾದವಿಲ್ಲ ಎಂದು ಜೈಶಂಕರ್ ವಿವರಿಸಿದರು.
ಕಳೆದ ದಶಕಗಳಲ್ಲಿ ಭಾರತದಲ್ಲಿ ಮತದಾನ ಶೇಕಡಾವಾರು 20% ರಷ್ಟು ಹೆಚ್ಚಾಗಿದೆ ಎಂದು ಹೇಳಿದರು. ಇದು ಭಾರತದಲ್ಲಿ ಪ್ರಜಾಪ್ರಭುತ್ವ ಬಲಗೊಳ್ಳುತ್ತಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಪ್ರಪಂಚದಾದ್ಯಂತ ಪ್ರಜಾಪ್ರಭುತ್ವ ಸಂಕಷ್ಟದಲ್ಲಿದೆ ಎಂದು ಹೇಳುವುದು ಸರಿಯಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಭಾರತದಲ್ಲಿ ನಾವು ಚೆನ್ನಾಗಿ ಬದುಕುತ್ತಿದ್ದೇವೆ, ಚೆನ್ನಾಗಿ ಮತ ಚಲಾಯಿಸುತ್ತಿದ್ದೇವೆ ಮತ್ತು ನಮ್ಮ ಪ್ರಜಾಪ್ರಭುತ್ವದ ಭವಿಷ್ಯದ ಬಗ್ಗೆ ಆಶಾವಾದಿಗಳಾಗಿದ್ದೇವೆ ಎಂದು ಜೈಶಂಕರ್ ತಿಳಿಸಿದರು.
ಭಾರತದ ಪ್ರಜಾಪ್ರಭುತ್ವ ಮಾದರಿಯ ಐತಿಹಾಸಿಕ ಹಿನ್ನೆಲೆಯ ಕುರಿತು ಜೈಶಂಕರ್ ಮಾತನಾಡಿದರು. ಸ್ವಾತಂತ್ರ್ಯದ ನಂತರ ಭಾರತವು ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿತು ಏಕೆಂದರೆ ಅದು ನಮ್ಮ ಸಲಹಾ ಮತ್ತು ಬಹುತ್ವ ಸಮಾಜದ ಮೌಲ್ಯಗಳಿಗೆ ಅನುಗುಣವಾಗಿದೆ ಎಂದು ಅವರು ಹೇಳಿದರು.