ರಾಜಸ್ಥಾನದಲ್ಲಿ ಮಂದಿರ ಧ್ವಂಸ- ಗೆಹ್ಲೋಟ್ ಸರ್ಕಾರದ ವಿರುದ್ಧ ಚುರುಕಾದ ಬಿಜೆಪಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಸರಾಯ್ ಮೊಹಲ್ಲಾದಲ್ಲಿ 300 ವರ್ಷಗಳಷ್ಟು ಹಳೆಯದಾದ ಶಿವ ದೇವಾಲಯವನ್ನು ಅಲ್ಲಿನ ಕಾಂಗ್ರೆಸ್‌ ಸರ್ಕಾರ ನೆಲಸಮಗೊಳಿಸಿದ್ದು, ದೇಶಾದ್ಯಂತ ಆಕ್ರೋಶ ಭುಗಿಲೆದ್ದಿದೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ರಾಜಸ್ಥಾನ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರ ಜನರ ಭಾವನೆಗಳಿಗೆ ಬೆಲೆಕೊಡದೆ ಪುರಾತನ ದೇವಾಲಯವನ್ನು ಕೆಡವಿರುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ ಎಂದು ಅವರು ಕಿಡಿಕಾರಿದ್ದಾರೆ.

ನಾವು ದೇಶದ ಪ್ರಾಚೀನ ಸಂಸ್ಕೃತಿಯನ್ನು ಕಾಪಾಡಲು ಶ್ರಮಿಸುತ್ತಿದ್ದೇವೆ. ಮತ್ತೊಂದೆಡೆ ಕಾಂಗ್ರೆಸ್‌ ನಮ್ಮ ಸಂಸ್ಕೃತಿಯ ಶ್ರೀಮಂತ ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸುತ್ತಿದೆ. ನಾವು ಗೋವಾದಲ್ಲಿ ಪೋರ್ಚುಗೀಸರಿಂದ ಧ್ವಂಸಗೊಂಡ ದೇವಾಲಯಗಳ ಪುನರ್ನಿನಿರ್ಮಾಣಕ್ಕೆ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯತತ್ಪರರಾಗಿದ್ದೇವೆ. ನಮಗೆ ನಮ್ಮ ಸಂಸ್ಕೃತಿಯ ಮಹತ್ವ ತಿಳಿದಿದೆ. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ನಾವು ಬದ್ಧರಾಗಿದ್ದೇವೆ. ಇದಕ್ಕಾಗಿ ನಮ್ಮ ರಾಜ್ಯದಲ್ಲಿ ದೇವಾಲಯಗಳ ಪುನರುತ್ಥಾನಕ್ಕಾಗಿ 20 ಕೋಟಿ ರೂ.ಗಳನ್ನು ಮೀಸಲಿರಿಸಿದ್ದೇವೆ ಎಂದು ಸಾವಂತ್ ಉಲ್ಲೇಖಿಸಿದ್ದಾರೆ.
ಬಿಜೆಪಿ ನಾಯಕ ಅಮಿತ್ ಮಾಳವಿಯಾ ಅವರೂ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.ಒಂದು ಕಡೆ ಕರೌಲಿ ಮತ್ತು ಜಹಾಂಗೀರಪುರಿ ಘಟನೆಗಳ ಬಗ್ಗೆ ಕಣ್ಣೀರು ಸುರಿಸುವುದು, ಮತ್ತೊಂದೆಡೆ ಧಾರ್ಮಿಕ ಸ್ಥಳಗಳ ಮೇಲೆ ದಾಳಿ ನಡೆಸಿ ಹಿಂದೂಗಳ ನಂಬಿಕೆಗೆ ಧಕ್ಕೆ ತರುವುದು ಕಾಂಗ್ರೆಸ್‌ನ ಜಾತ್ಯತೀತತೆಯ ಎರಡು ಮುಖಗಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸಂಸದ ಕಿರೋಡಿ ಮೀನಾ ಸಹ ರಾಜಸ್ಥಾನ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಶೋಕ್ ಗೆಹ್ಲೋಟ್ ಅವರು ಇತರ ರಾಜ್ಯಗಳಲ್ಲಿ ಬುಲ್ಡೋಜರ್‌ ದಾಳಿಯನ್ನು ಖಂಡಿಸುತ್ತಾರೆ. ಆದರೆ ತಮ್ಮ ರಾಜ್ಯದಲ್ಲಿ ದೇವಾಲಯಗಳನ್ನು ಕೆಡವಲು ಸ್ವತಃ ಬುಲ್ಡೋಜರ್ ಕಳುಹಿಸುತ್ತಾರೆ ಎಂದು ಮೀನಾ ಕಿಡಿಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!