ನಾಳೆ ಗುಜರಾತಿನಲ್ಲಿ ನಾರಿ ಶಕ್ತಿಯ ಪ್ರದರ್ಶನ: ಪ್ರಧಾನಿ ಮೋದಿ ಭದ್ರತೆಗೆ ಮಹಿಳಾ ಪೊಲೀಸ್ ಸರ್ಪಗಾವಲು!

 ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಳೆ ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆ ಗುಜರಾತ್‌ನ ನವಸಾರಿ ಜಿಲ್ಲೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದು, ವಿಶೇಷ ಏನೆಂದರೆ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಕಾರ್ಯಕ್ರಮದ ಭದ್ರತಾ ವ್ಯವಸ್ಥೆಯನ್ನು ಸಂಪೂರ್ಣ ಮಹಿಳಾ ಪೊಲೀಸ್ ತುಕಡಿಯೇ ನಿರ್ವಹಿಸಲಿದೆ ಎಂದು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಹೇಳಿದ್ದಾರೆ.

ಪ್ರಧಾನ ಮಂತ್ರಿಗಳು ವಂಶಿ ಬೋರ್ಸಿ ಗ್ರಾಮದಲ್ಲಿರುವ ಹೆಲಿಪ್ಯಾಡ್‌ಗೆ ಆಗಮಿಸುವುದರಿಂದ ಹಿಡಿದು ಕಾರ್ಯಕ್ರಮದ ಸ್ಥಳದವರೆಗೆ ಅವರ ಭದ್ರತೆಯನ್ನು ಮಹಿಳಾ ಪೊಲೀಸ್ ಸಿಬ್ಬಂದಿಯೇ ನಿಭಾಯಿಸಲಿದ್ದಾರೆ ಎಂದು ಹೇಳಿದರು.

ಮಹಿಳಾ ಭದ್ರತಾ ತಂಡದಲ್ಲಿ 2,100 ಮಹಿಳಾ ಕಾನ್‌ಸ್ಟೆಬಲ್‌ಗಳು, 187 ಸಬ್-ಇನ್ಸ್ಪೆಕ್ಟರ್‌ಗಳು, 61 ಪೊಲೀಸ್ ಇನ್ಸ್ಪೆಕ್ಟರ್‌ಗಳು, 16 ಉಪಪೊಲೀಸ್ ವರಿಷ್ಠಾಧಿಕಾರಿಗಳು (ಡಿಎಸ್ಪಿಗಳು), 5 ಪೊಲೀಸ್ ಸೂಪರಿಂಟೆಂಡೆಂಟ್‌ಗಳು, 1 ಪೊಲೀಸ್ ಮಹಾನಿರ್ದೇಶಕರು (ಐಜಿಪಿ), 1 ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಇರಲಿದ್ದಾರೆ. ಭದ್ರತಾ ವ್ಯವಸ್ಥೆಗಳನ್ನು ಹಿರಿಯ ಐಪಿಎಸ್ ಅಧಿಕಾರಿ ಮತ್ತು ಗೃಹ ಕಾರ್ಯದರ್ಶಿ ನಿಪುನಾ ತೊರವಾನೆ ಅವರು ಮೇಲ್ವಿಚಾರಣೆ ಮಾಡಲಿದ್ದಾರೆ.

ಸಂಪೂರ್ಣ ಮಹಿಳೆಯರೇ ಇರುವ ಭದ್ರತಾ ಪಡೆಗಳ ನಿಯೋಜನೆಯು ಸುರಕ್ಷತೆ ಮತ್ತು ಭದ್ರತೆಗೆ ಮಹಿಳೆಯರ ಕೊಡುಗೆಯನ್ನು ಮಹಿಳಾ ದಿನಾಚರಣೆಯಂದು ಜಗತ್ತಿಗೆ ಬಲವಾದ ಸಂದೇಶವನ್ನು ನೀಡುತ್ತದೆ. ಮಹಿಳಾ ಶಕ್ತಿ ಗುಜರಾತ್ ಅನ್ನು ಹೇಗೆ ಸುರಕ್ಷಿತ ಮತ್ತು ಸುಭದ್ರ ರಾಜ್ಯವನ್ನಾಗಿ ಮಾಡಲು ಸಕ್ರಿಯವಾಗಿ ಕೊಡುಗೆ ನೀಡುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.

ಪ್ರಧಾನಿ ಮೋದಿ ಮಾರ್ಚ್ 8 ಮತ್ತು 9 ರಂದು ಗುಜರಾತ್ ಮತ್ತು ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ ಹವೇಲಿಗೆ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಮಾರ್ಚ್ 8 ರಂದು ವಂಶಿ ಬೋರ್ಸಿ ಗ್ರಾಮದಲ್ಲಿ ನಡೆಯಲಿರುವ `ಲಖ್ಪತಿ ದೀದಿ ಸಮ್ಮೇಳನ’ದಲ್ಲಿ ಅವರು ಮಾತನಾಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!