January22, 2026
Thursday, January 22, 2026
spot_img

16 ರಾಜ್ಯಗಳಲ್ಲಿ ದಟ್ಟ ಮಂಜು: ರೈಲು, ರಸ್ತೆ , ವಿಮಾನ ಸಂಚಾರಕ್ಕೆ ಅಲರ್ಟ್ ನೀಡಿದ ಹವಾಮಾನ ಇಲಾಖೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:


ಮಧ್ಯಪ್ರದೇಶ ಹಾಗೂ ಉತ್ತರಾಖಂಡ ಸಹಿತ 16 ರಾಜ್ಯಗಳಿಗೆ ಭಾರತೀಯ ಹವಾಮಾನ ಇಲಾಖೆ (IMD) ಮಂಜಿನ ಎಚ್ಚರಿಕೆ ನೀಡಿದೆ.

ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರಾಖಂಡ, ಅರುಣಾಚಲ ಪ್ರದೇಶ, ಆಸ್ಸಾಂ, ಮೇಘಾಲಯ, ಬಿಹಾರ, ಹಿಮಾಚಲ ಪ್ರದೇಶ, ಜಾರ್ಖಂಡ್, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ ಮತ್ತು ಒಡಿಶಾದಲ್ಲಿ ದಟ್ಟವಾದ ಮಂಜು ಕವಿದಿರುವ ವಾತಾವರಣವಿರುವ ಸಾಧ್ಯತೆಯಿದೆ.

ಇನ್ನೂ ಮಂಜಿನ ಕಾರಣದಿಂದಾಗಿ ಉತ್ತರ ಪ್ರದೇಶದ ಎಲ್ಲಾ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಟ್ಟವಾದ ಮಂಜಿನಿಂದಾಗಿ ರೈಲು, ರಸ್ತೆ ಹಾಗೂ ವಿಮಾನ ಸಂಚಾರಕ್ಕೆ ಅಡ್ಡಿಯುಂಟಾಗುವ ಸಾಧ್ಯತೆಯಿದೆ.

ಬುಧವಾರ (ಡಿ.17) ದಟ್ಟ ಮಂಜು ಹಾಗೂ ಹೊಗೆ ಕಾರಣದಿಂದಾಗಿ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆಯಬೇಕಿದ್ದ ಕ್ರಿಕೆಟ್ ಪಂದ್ಯವನ್ನು ರದ್ದುಗೊಳಿಸಲಾಯಿತು. ಗುರುವಾರ (ಡಿ.18) ಬೆಳಗ್ಗೆಯಿಂದ ದೆಹಲಿ ಸೇರಿದಂತೆ ಹೆಚ್ಚಿನ ಪ್ರದೇಶಗಳಲ್ಲಿ ದಟ್ಟವಾದ ಮಂಜು ಆವರಿಸಿಕೊಂಡಿರುವುದು ಕಂಡುಬಂದಿದೆ. ಈ ಹಿನ್ನೆಲೆ ಗೋಚರಣೆ ಪ್ರಮಾಣ ಕಡಿಮೆಯಾಗಿದ್ದು, ಜನಜೀವನದ ಮೇಲೆ ಪರಿಣಾಮ ಬೀರಿದೆ.

ಇನ್ನೂ ರಾಷ್ಟ್ರರಾಜಧಾನಿ ನವದೆಹಲಿಯ ಹೆಚ್ಚಿನ ಪ್ರದೇಶಗಳಲ್ಲಿ ವಾಯುಗುಣಮಟ್ಟ ಸೂಚ್ಯಂಕ 200ಕ್ಕಿಂತ ಹೆಚ್ಚಾಗಿದ್ದು, ಅತ್ಯಂತ ಕಳಪೆ ಎಂದು ವರದಿಯಾಗಿದೆ. ಹೊಗೆ ಹಾಗೂ ಮಂಜಿನಿಂದಾಗಿ ಗೋಚರತೆ ಕಡಿಮೆಯಾಗಿದೆ.

ಇನ್ನೂ ಮಧ್ಯಪ್ರದೇಶ ಮತ್ತು ಉತ್ತರಾಖಂಡದ ಪಶ್ಚಿಮ ಪ್ರದೇಶಗಳಿಗೆ ಶೀತ ಗಾಳಿಯ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ತಮಿಳುನಾಡು, ಕೇರಳ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಮಿಂಚು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

Must Read