ಗಡಿ ಸಂಘರ್ಷದ ನಡುವೆಯೇ ಸಿಕ್ಕಿಂನಲ್ಲಿ ಯುದ್ಧ ವಿಮಾನ ನಿಯೋಜನೆ: ಆತಂಕ ಮೂಡಿಸಿದ ಚೀನಾ ನಡೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಕ್ಕಿಂಗೆ ಸಮೀಪದ ತನ್ನ ಗಡಿ ಭಾಗದಲ್ಲಿ ಚೀನಾ ಅತ್ಯಾಧುನಿಕ ಯುದ್ಧ ವಿಮಾನ ಜೆ20 ನಿಯೋಜಿಸಿರುವುದನ್ನು ಭಾರತೀಯ ರಕ್ಷಣಾ ಪಡೆಗಳು ಪತ್ತೆಮಾಡಿವೆ.

ಪೂರ್ವ ಲಡಾಖ್ ಗಡಿಗೆ ಸಂಬಂಧಿಸಿ ಭಾರತ-ಚೀನಾ ನಡುವಿನ ಸಂಘರ್ಷ ಮುಂದುವರಿದಿರುವ ನಡುವೆಯೇ ನಡೆದಿರುವ ಈ ಬೆಳವಣಿಗೆ ಹೊಸ ಆತಂಕಕ್ಕೆ ಕಾರಣವಾಗಿದೆ. ಸಿಕ್ಕಿಂಗೆ ಹೊಂದಿಕೊಂಡ ಗಡಿಗೆ ಸಮೀಪವಿರುವ ಶಿಗಟ್ಸೆ ವಾಯುನೆಲೆಯಲ್ಲಿ ಚೀನಾ ಆರು ಯುದ್ಧವಿಮಾನಗಳನ್ನು ನಿಯೋಜನೆ ಮಾಡಿದ್ದು, ಪ್ರತೀ ಬೆಳವಣಿಗೆಗಳ ಮೇಲೆ ರಕ್ಷಣಾ ಪಡೆಗಳು ಹದ್ದಿನಕಣ್ಣಿಟ್ಟಿವೆ.

ಈ ವಿಮಾನಗಳಲ್ಲದೆ ಜೆ-10 ಮಾದರಿಯ ಯುದ್ಧವಿಮಾನಗಳು, ವೈಮಾನಿಕ ದಾಳಿ ಮುಂಚಿತವಾಗಿ ಎಚ್ಚರಿಕೆ ನೀಡಬಲ್ಲ ಕೆಜೆ-500 ವಿಮಾನಗಳು ಕೂಡಾ ಗಡಿಯಲ್ಲಿ ನಿಯೋಜನೆಯಾಗಿರುವುದನ್ನು ಉಪಗ್ರಹ ಸೆರೆಹಿಡಿದ ಚಿತ್ರಗಳು ಸ್ಪಷ್ಟಪಡಿಸಿವೆ. ಈ ಬಗ್ಗೆ ’ಆಲ್ ಸೋರ್ಸ್ ಅನಲಿಸಿಸ್’ ಎಂಬ ಗುಪ್ತಚರ ಸಂಸ್ಥೆ ಮಾಹಿತಿ ಬಹಿರಂಗಪಡಿಸಿದ್ದು, ಚಿತ್ರವನ್ನು ಕೂಡಾ ಬಿಡುಗಡೆ ಮಾಡಿದೆ.

ಚೀನಾದ ಈ ನಡೆ ಕುರಿತು ಭಾರತೀಯ ವಾಯುಪಡೆ, ರಕ್ಷಣಾ ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಚೀನಾ ಸರ್ಕಾರದಿಂದಲೂ ಯಾವುದೇ ಪ್ರತಿಕ್ರಿಯೆ ಇಲ್ಲ. ಎತ್ತರ ಪ್ರದೇಶಗಳಲ್ಲಿ ಕೈಗೊಳ್ಳುವ ತರಬೇತಿಗಾಗಿ ಈ ಯುದ್ಧ ವಿಮಾನಗಳನ್ನು ನಿಯೋಜನೆ ಮಾಡಿರುವ ಸಾಧ್ಯತೆ ಇದೆ ಎಂದೂ ಅಂದಾಜಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!