ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೀರ್ತಿಚಕ್ರ ಪ್ರಶಸ್ತಿ ವಿಜೇತ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಪತ್ನಿಯ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ಕಿಡಿಗೇಡಿಗಳ ವಿರುದ್ಧ ದೆಹಲಿಯ ‘ಇಂಟೆಲಿಜೆನ್ಸ್ ಫ್ಯೂಜನ್ ಆಯಂಡ್ ಸ್ಟ್ರಾಟೆಜಿಕ್ ಆಪರೇಷನ್ಸ್‌ನ (ಐಎಫ್‌ಎಸ್‌ಒ) ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದಾರೆ.
ಭಾರತೀಯ ನ್ಯಾಯ ಸಂಹಿತೆ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ವಿವಿಧ ಸೆಕ್ಷನ್‌ಗಳಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಂಶುಮಾನ್ ಸಿಂಗ್ ಅವರ ಪತ್ನಿಯ ಬಗ್ಗೆ ಅಶ್ಲೀಲ ಕಾಮೆಂಟ್ ಮಾಡಿದವರ ಬಗ್ಗೆ ವಿವರಗಳನ್ನು ನೀಡುವಂತೆ ಸಾಮಾಜಿಕ ಮಾಧ್ಯಮಗಳಾದ ‘ಎಕ್ಸ್’ (ಟ್ವಿಟರ್), ಮೆಟಾಗೆ (ಫೇಸ್‌ಬುಕ್) ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆ ಸಂಬಂಧ ರಾಷ್ಟ್ರೀಯ ಮಹಿಳಾ ಆಯೋಗವು (ಎನ್‌ಸಿಡಬ್ಲ್ಯು) ದೆಹಲಿ ಪೊಲೀಸರಿಗೆ ದೂರು ನೀಡಿತ್ತು. ಜತೆಗೆ, ಪ್ರಕರಣದ ತನಿಖೆ ಹಾಗೂ ಕೈಗೊಂಡ ಕ್ರಮದ ಬಗ್ಗೆ ಮೂರು ದಿನಗಳಲ್ಲಿ ವರದಿ ನೀಡುವಂತೆಯೂ ಸೂಚಿಸಿತ್ತು.
ಈ ಬಾರಿ ಭಾರತೀಯ ಸೇನೆಯ ಆರು ಮಂದಿ ವೀರರನ್ನು ಕೀರ್ತಿ ಚಕ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಆರು ಮಂದಿ ಪೈಕಿ ಮೂವರು ಈ ಪ್ರಶಸ್ತಿಯನ್ನು ಮರಣೋತ್ತರವಾಗಿ ಪಡೆದಿದ್ದಾರೆ.
ಶಾಂತಿಕಾಲದ ಎರಡನೆಯ ಅತ್ಯುನ್ನತ ಶೌರ್ಯ ಪ್ರಶಸ್ತಿ ಇದು. 21 ಪ್ಯಾರಾಚೂಟ್ ರೆಜಿಮೆಂಟ್‌ನ ಮೇಜರ್ ದಿಗ್ವಿಜಯ್ ಸಿಂಗ್, 4 ಸಿಖ್ ರೆಜಿಮೆಂಟ್‌ನ ಮೇಜರ್ ದೀಪೇಂದ್ರ ವಿಕ್ರಮ್, 21 ಮಹರ್‌ನ ಹವಾಲ್ದಾರ್ ಪವನ್ ಕುಮಾರ್ ಯಾದವ್ ಅವರು ರಾಷ್ಟ್ರಪತಿಯವರಿಂದ ಕೀರ್ತಿ ಚಕ್ರ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಆರ್ಮಿ ಮೆಡಿಕಲ್ ಕೋರ್‌ನ ಕ್ಯಾಪ್ಟನ್ ಅಂಶುಮಾನ್ ಸಿಂಗ್, ಪ್ಯಾರಾಚೂಟ್ ರೆಜಿಮೆಂಟ್‌ನ 9ನೆಯ ತುಕಡಿಯ ಹವಾಲ್ದಾರ್ ಅಬ್ದುಲ್ ಮಜಿದ್, 55 ಗ್ರೆನೆಡಿಯರ್ಸ್‌ನ ಸಿಪಾಯಿ ಪವನ್ ಕುಮಾರ್ ಅವರು ಮರಣೋತ್ತರವಾಗಿ ಈ ಪ್ರಶಸ್ತಿಗೆ ಪಾತ್ರರಾಗಿದ್ದರು. ಅವರ ಪರವಾಗಿ ಕುಟುಂಬಸ್ಥರು ಪ್ರಶಸ್ತಿ ಸ್ವೀಕರಿಸಿದ್ದಾರೆ.