ಎಫ್‌ಎಸ್‌ಎಲ್ ವರದಿ ಬಂದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ: ರೇಣುಕಾಚಾರ್ಯ ಆಕ್ರೋಶ

ಹೊಸದಿಗಂತ ವರದಿ, ದಾವಣಗೆರೆ:

ರಾಜ್ಯದಲ್ಲಿ ಬಾಬರ್, ಟಿಪ್ಪು ಸರ್ಕಾರವಿದೆ. ವಿಧಾನಸೌಧದಲ್ಲೇ ಪಾಕಿಸ್ಥಾನ ಜಿಂದಾಬಾದ್ ಘೋಷಣೆ ಕುರಿತಂತೆ ಎಫ್.ಎಸ್.ಎಲ್ ವರದಿ ಬಂದಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ದೃಷ್ಟಿಯಲ್ಲಿ ಇಂತಹವರೆಲ್ಲಾ ಅಮಾಯಕರು, ಡಿಕೆಶಿಗೆ ಬ್ರದರ್ಸ್. ಇನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ. ಪರಮೇಶ್ವರ ದಕ್ಷವಾಗಿರಬೇಕು. ಪಾಕಿಸ್ಥಾನ ಪರ ಜಿಂದಾಬಾದ್ ಘೋಷಣೆ ಕೂಗಿದ ದೇಶದ್ರೋಹಿಗೆ ಬಂಧಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇನ್ನೂ ಟೇಕ್ ಆಫ್ ಆಗಿಲ್ಲವೆಂದು ಜನ ಹೇಳುತ್ತಿದ್ದಾರೆ. ರಾಮೇಶ್ವರಂ ಕೆಫೆ ಬ್ಲಾಸ್ಟ್ ವಿಚಾರದಲ್ಲೂ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಸರ್ಕಾರಕ್ಕೆ ಆಗುತ್ತಿಲ್ಲ. ಗ್ಯಾರಂಟಿ ಯೋಜನೆಗಳ ಕುರಿತಂತೆ ಸಮಾವೇಶ ಮಾಡಿ ನಿತ್ಯವೂ ಪ್ರಚಾರ ಪಡೆಯುತ್ತಾರೆ. ಆದರೆ ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಸರ್ಕಾರವು ಪತನಗೊಳ್ಳಲಿದೆ. ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಆಮಿಷವೊಡ್ಡಲಾಗುತ್ತಿದೆ ಎನ್ನುವ ಸಿಎಂ ಸಿದ್ದರಾಮಯ್ಯ ಕೈಯಲ್ಲೇ ಪೊಲೀಸ್ ಇಲಾಖೆ, ಅಧಿಕಾರವೂ ಇದೆ. ಈ ಬಗ್ಗೆ ತನಿಖೆ ಮಾಡಿಸಲಿ. ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ. ನಾವು 50 ಕೋಟಿ ಕೊಡುವುದೂ ಇಲ್ಲ, ಆಪರೇಷನ್ ಕಮಲ ಸಹ ಮಾಡುವುದಿಲ್ಲ. ಆದರೂ ನಿಮ್ಮ ಸರ್ಕಾರ ಬೀಳಲಿದೆ ಎಂದು ಅವರು ತಿರುಗೇಟು ನೀಡಿದರು.

ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಬೇಡಿಕೆ ವಿಚಾರವಾಗಿ ನಮ್ಮ ಪಕ್ಷದ ಎಲ್ಲಾ ಹಿರಿಯ ನಾಯಕರನ್ನೂ ಭೇಟಿಯಾಗಿದ್ದು, ನಾವು ನಾಲ್ಕೂ ಜನ ಆಕಾಂಕ್ಷಿಗಳ ಬಗ್ಗೆಯೂ ತಿಳಿಸಿದ್ದೇವೆ. ನಮ್ಮ ನಾಲ್ವರಲ್ಲಿ ಯಾರಿಗಾದರೂ ಟಿಕೆಟ್ ಕೊಡುವಂತೆ ವೀಕ್ಷಕರಿಗೆ ಮನವಿ ಮಾಡಿದ್ದೇವೆ. ನಾವು ಬಿಜೆಪಿ ನಾಯಕರ ಮನೆಯಲ್ಲಿ ಸೇರಿ ಚರ್ಚಿಸಿದ್ದೇವೆ. ನಮ್ಮದು ಬಂಡಾಯ ಸಭೆ ಅಲ್ಲ, ಪಕ್ಷದ ಸಭೆಯಾಗಿದೆ. ನಮ್ಮ ಕಾರ್ಯಕರ್ತರ ಅಭಿಪ್ರಾಯವನ್ನೂ ವೀಕ್ಷಕರ ಗಮನಕ್ಕೆ ತಂದಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ನಾವು ಅವಕಾಶ ಕೊಡುವಂತೆ ಕೇಳಿದ್ದು ಸತ್ಯ. ಅದನ್ನು ಮುಚ್ಚಿಡಲಾಗುವುದಿಲ್ಲ. ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ. ರಾಜ್ಯದಲ್ಲಿ ನಾವು ಬಿಜೆಪಿಯವರು 28 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ. ದೇಶಾದ್ಯಂತ ೪೦೦ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು, ಮತ್ತೆ ನರೇಂದ್ರ ಮೋದಿಯವರನ್ನು 3ನೇ ಬಾರಿಗೆ ಪ್ರಧಾನಿ ಮಾಡುತ್ತೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!