ಹೊಸದಿಗಂತ ವರದಿ ಹಾವೇರಿ:
ರಾಜ್ಯದಲ್ಲಿ 35 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ಲಂಬಾಣಿ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದ ಪರಿಣಾಮ ಬಹುಮತ ಪಡೆಯಲು ಸಾಧ್ಯವಾಗಿದೆ. ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಜಯ ಸಾಧಿಸಿರುವ ರುದ್ರಪ್ಪ ಲಮಾಣಿ ಅವರನ್ನು ಸಚಿವ ಸಂಪುಟದಿಂದ ಹೊರಗಿಟ್ಟಿರುವುದು ಖೇದಕರ ಎಂದು ಕರ್ನಾಟಕ ಕ್ಷತ್ರೀಯ ಒಕ್ಕೂಟದ ಜಿಲ್ಲಾಧ್ಯಕ್ಷ ನಾಗರಾಜ ಜೋರಾಪುರ ಹೇಳಿದರು.
ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷತ್ರೀಯ ಸಮಾಜದ ಪೈಕಿ ಬಂಜಾರ ಸಮುದಾಯವೂ ಒಂದು. ಈ ಬಾರಿ ಒಳಮೀಸಲಾತಿ ಬಂಜಾರ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ನಮ್ಮ ಸಮುದಾಯ ಬಿಜೆಪಿಯನ್ನು ಧಿಕ್ಕರಿಸಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿತ್ತು. ಇದರ ಪರಿಣಾಮ ರಾಜ್ಯದಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆಲುವು ಸಾಧಿಸಲು ಕಾರಣವಾಗಿದೆ ಎಂದರು.
ಈ ಸಂಗತಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೂ ಗೊತ್ತು. ಆದರೂ ಬಂಜಾರ ಸಮುದಾಯದ ಏಕೈಕ ಶಾಸಕರಾಗಿದ್ದ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ನೀಡದಿರುವುದು ಬೇಸರ ಮೂಡಿಸಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಕ್ಷತ್ರೀಯ ಒಕ್ಕೂಟದ ಉಪಾಧ್ಯಕ್ಷ ಅಶೋಕಸಿಂಗ್ ರಜಪೂತ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಬಂಜಾರ ಸಮುದಾಯ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿತ್ತು. ಸಮುದಾಯದ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ಸಿಗಬಹುದು ಎಂದು ಕರ್ನಾಟಕ ಕ್ಷತ್ರೀಯ ಒಕ್ಕೂಟ ನಿರೀಕ್ಷೆಯಲ್ಲಿತ್ತು. ಆದರೆ ಕೊನೆ ಗಳಿಗೆಯಲ್ಲಿ ಸಚಿವ ಸ್ಥಾನದಿಂದ ವಂಚಿತರನ್ನಾಗಿಸಿರುವುದು ಒಕ್ಕೂಟ ಖಂಡಿಸುತ್ತದೆ ಎಂದರು.
ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ರಮೇಶ ಮುದ್ನಾಳ ಮಾತನಾಡಿ, ಸರ್ವ ಸಮುದಾಯಗಳೊಂದಿಗೆ ಸೌಹಾರ್ದ ಸಂಬAಧ ಹೊಂದಿರುವ ಶಾಸಕ ರುದ್ರಪ್ಪ ಲಮಾಣಿ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡು ಬಂಜಾರ ಸಮಾಜಕ್ಕೆ ನ್ಯಾಯ ಒದಗಿಸಬೇಕಿತ್ತು. ಸಂಭಾವಿತ ವ್ಯಕ್ತಿತ್ವದ ಅವರಿಗೆ ಮುಂದಿನ ದಿನಗಳಲ್ಲಿ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸಿದರು.
ಎಸ್‌ಎಸ್‌ಕೆ ಸಮಾಜದ ಶಂಕರ ಮೆಹರವಾಡೆ, ಪ್ರಮೋದ ನವಲೆ, ಚನ್ನಪ್ಪ ಕಲಾಲ, ನಾರಾಯಣಸಾ ಬಾಂಡಗೆ, ಮಾರುತಿ ನೇಕಾರ, ಚಂದ್ರಶೇಖರ ಜಾಧವ, ಭಾಗ್ಯಶ್ರೀ ಮೋರೆ ಉಪಸ್ಥಿತರಿದ್ದರು.