ಅಪಾಯಕಾರಿ ಮನೆಗಳಿದ್ದರೆ ತಕ್ಷಣ ಪತ್ತೆಹಚ್ಚಿ: ಉಳ್ಳಾಲ ದುರಂತ ಸ್ಥಳಕ್ಕೆ ಸಚಿವ ಕೃಷ್ಣ ಭೈರೇಗೌಡ ಭೇಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:  

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಮುನ್ನೂರು ಗ್ರಾಮದ ಮದನಿ ನಗರದಲ್ಲಿ ಮನೆ ಮೇಲೆ ಆವರಣ ಗೋಡೆ ಕುಸಿದ ಪರಿಣಾಮ ಒಂದೇ ಕುಟುಂಬದ ನಾಲ್ಕು ಮಂದಿ ಮೃತ ಪಟ್ಟ ಘಟನೆ ಬುಧವಾರ ನಸುಕಿನ ಜಾವ ಸಂಭವಿಸಿದ್ದು ಘಟನಾ ಪ್ರದೇಶಕ್ಕೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಬುಧವಾರ ಸಂಜೆ ಭೇಟಿ ನೀಡಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇದೊಂದು ವಿಷಾದನೀಯ ದುರಂತವಾಗಿದ್ದು, ಎಲ್ಲರ ಮನ ಕಲಕುವಂತಿದೆ.ಈ ಬಗ್ಗೆ ಮುಖ್ಯ ಮಂತ್ರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದು ,ತಕ್ಷಣ ನನ್ನನ್ನು ಘಟನಾ ಸ್ಥಳಕ್ಕೆ ಹೋಗುವಂತೆ ಹೇಳಿದ್ದು ಸರಕಾರದಿಂದ ಎಲ್ಲ ರೀತಿಯ ಸಹಕಾರ ನೀಡುವಂತೆ ಸೂಚಿಸಿದ್ದಾರೆ. ಪೃಕೃತಿ ವಿಕೋಪದಂತಹ ಘಟನೆಗಳನ್ನ ತಡೆಗಟ್ಟಲು ಸಾಧ್ಯ ಇಲ್ಲ,ಆದರೂ ಸಾಧ್ಯವಾದಷ್ಟು ಇಂತಹ ಘಟನೆಗಳನ್ನು ತಡೆಗಟ್ಟಲು ಪ್ರಯತ್ನಿಸಬೇಕೆಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.ಇಲ್ಲಿ ಇಳಿಜಾರು ಬೆಟ್ಟ ಪ್ರದೇಶಗಳನ್ನ ಕಡಿದು,ತಡೆಗೋಡೆ ಕಟ್ಟಿ ಮನೆಗಳನ್ನ ಕಟ್ಟಿಕೊಂಡು ಆತಂಕದಲ್ಲೇ ಜನರು ಜೀವನ ನಡೆಸುತ್ತಿದ್ದಾರೆ.ಜಾಗದ ಕೊರತೆಯಿಂದ ಅನಿವಾರ್ಯವಾಗಿ ಈ ರೀತಿ ಮನೆಗಳನ್ನು ಕಟ್ಟುತ್ತಿದ್ದಾರೆ.ಮನೆ ನಿರ್ಮಿಸುವಾಗ ಯಾವುದೇ ರಕ್ಷಣಾ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ.ಈ ರೀತಿ ಸಮಸ್ಯೆಗಳಿಂದ ಕೂಡಿರುವ ಮನೆಗಳನ್ನ ಪ್ರತೀ ಗ್ರಾಮ ಪಂಚಾಯತ್ ಗಳು ಗುರುತಿಸಿ ತಕ್ಷಣ ಸರ್ವೇ ಮಾಡಿ ಅವರಿಗೆ ಎಚ್ಚರಿಕೆ ನೀಡುವ ಕಾರ್ಯ ಸರಕಾರದಿಂದ ನಡೆಸಲು ಜಿಲ್ಲಾಧಿಕಾರಿಗಳಿಗೆ ನಾನು ಮತ್ತು ಸ್ಪೀಕರ್ ಖಾದರ್ ಅವರು ಸೂಚನೆ ನೀಡಿದ್ದೇವೆ.ಅಧಿಕ ಮಳೆಯಾದಾಗ ಯಾವುದೇ ಅವಘಡಗಳು ನಡೆಯದಂತೆ ಅಪಾಯಕಾರಿ ಮನೆಗಳ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ.ಸ್ಪೀಕರ್ ಖಾದರ್ ಅವರ ಮಾರ್ಗದರ್ಶನದಲ್ಲಿ ಮೃತರ ಕುಟುಂಬಕ್ಕೆ ಶೀಘ್ರವೇ ಸೂಕ್ತ ಪರಿಹಾರ ಕೊಡಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

ಕೇಂದ್ರ ಸರಕಾರದ ಅಧೀನದ ಜಿಯೋಗ್ರಾಫಿಕಲ್ ಸರ್ವೆ ಆಫ್ ಇಂಡಿಯಾದ ಸಹಕಾರದೊಂದಿಗೆ ಎಲ್ಲೆಲ್ಲಿ ಭೂಕುಸಿತ ನಡೆಯುತ್ತದೆ ಎಂಬ ಪ್ರದೇಶಗಳನ್ನ ಗುರುತಿಸಿದ್ದೇವೆ.ಅದರಲ್ಲಿ ಯಾವ ಪ್ರದೇಶ ತೀರಾ ತೊಂದರೆಗೊಳಗಾಗುತ್ತವೆ ಎಂಬುದನ್ನ ಎ,ಬಿ,ಸಿ ಎಂದು ಪ್ರಭೇದ ಮಾಡಿ ತೀವ್ರ ಸ್ವರೂಪದಲ್ಲಿ ತೊಂದರೆ ಆಗುವ ಪ್ರದೇಶಗಳ ಬಗೆಗಿನ ವರದಿಯನ್ನ ಎಲ್ಲಾ ಜಿಲ್ಲಾಡಳಿತಗಳಿಗೆ ನೀಡಿದ್ದೇವೆ.ಮಳೆಗಾಲದಲ್ಲಿ ಆ ಪ್ರದೇಶಗಳಿಗೆ ಜಿಲ್ಲಾಡಳಿತಗಳು ವಿಶೇಷ ಗಮನ ಕೊಡಬೇಕು.ಎಲ್ಲಾ ಕಡೆ ನಡೆಯುವ ಭೂಕುಸಿತಕ್ಕೆ ತಡೆಗೋಡೆ ಕಟ್ಟಲು ಸಾಧ್ಯವಿಲ್ಲ.ಮಳೆನಾಡು ಭಾಗದಲ್ಲಿ ತೀವ್ರ ಸಮಸ್ಯೆ ಇರೋಕಡೆ ತಡೆಗೋಡೆ ಕಟ್ಟಲು ಎಂಭತ್ತು ಕೋಟಿ ಅನುದಾನ ಕೊಡಬೇಕೆನ್ನುವ ಯೋಜನೆಯನ್ನು ಇಲಾಖೆಯಲ್ಲಿ ಹಾಕಲಾಗಿದೆ.ರಸ್ತೆ ಬದಿಯಲ್ಲಿ ಭೂ ಕುಸಿತ ಆಗೋ ಪ್ರದೇಶಗಳಿಗೆ ತಡೆಗೋಡೆ ಕಟ್ಟಲು ಎಲ್ಲ ಜಿಲ್ಲೆಗಳಿಗೂ ಅನುದಾನ ಒದಗಿಸುವುದಾಗಿ ಹೇಳಿದರು.

ಕಡಲ್ಕೊರೆತ ಸಮಸ್ಯೆ ಹೆಚ್ಚಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ರಾಜ್ಯದಲ್ಲಿ 326 ಕಿಮೀ ಉದ್ದಕ್ಕೆ ಕಡಲ ತೀರ ಇದ್ದು ಕೆಲವು ಕಡೆ ಸಮಸ್ಯೆ ಇರುವುದು ತಿಳಿದಿದೆ. ಕೆಲವು ಕಡೆ ಪ್ರಯೋಜನ ಆಗಿದ್ದರೆ,ಇನ್ನು ಕೆಲವು ಕಡೆ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಸಮಸ್ಯೆ ಆಗಿದೆ.ಮಂಗಳೂರಿನಲ್ಲಿ ಸಮಸ್ಯೆ ಆಗಿರುವ ಬಗ್ಗೆ ಸ್ಪೀಕ‌ರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ಮಾಡಿದ್ದೇವೆ.ಕಡಲ್ಕೊರೆತಕ್ಕೆ ತಡೆಗೋಡೆ ರಚಿಸಲು 80 ಕೋಟಿ ರೂಪಾಯಿ ಅನುದಾನ ನೀಡುವುದಕ್ಕೆ ತೀರ್ಮಾನ ಮಾಡಿದ್ದೇವೆ ಎಂದರು.

ಸ್ಥಳೀಯ ಶಾಸಕರು,ಸ್ಪೀಕರ್ ಯು.ಟಿ.ಖಾದರ್ ಮತ್ತು ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!