ಹೊಸದಿಗಂತ ವರದಿ, ಮಂಡ್ಯ :
ಪದೇ ಪದೇ ಮಹಿಳೆಯರ ಮೇಲೆ ದೌರ್ಜನ್ಯ, ಹಲ್ಲೆ, ಹತ್ಯೆ ಅವ್ಯಾಹತವಾಗಿ ನಡೆಯುತ್ತಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಕಂಡುಬಂದಿದೆ. ರಾಜ್ಯ ಸರ್ಕಾರ ಜನರನ್ನು ಭಯದ ವಾತಾವರಣದಲ್ಲಿ ಬದುವ ಧಾರುಣ ಸ್ಥಿತಿಗೆ ತಲುಪಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಎಸ್.ಎನ್. ಇಂದ್ರೇಶ್ ಆರೋಪಿಸಿದರು.
ಆಡಳಿತ ಮತ್ತು ಕಾನೂನು ಸುವ್ಯವಸ್ಥೆಯನ್ನು ಹೇಗೆ ಹತೋಟಿಗೆ ತರಬೇಕು ಎಂಬ ಸಾಮರ್ಥ್ಯವೇ ಇಲ್ಲದ ಗೃಹ ಸಚಿವರು ಇದ್ದಾರೆ. ಪರಿಸ್ಥಿತಿಯನ್ನು ಅವಲೋಕನ ಮಾಡಲೂ ಅಸಮರ್ಥರಾಗಿರುವ ರಾಜ್ಯ ಸರ್ಕಾರ ಇರುವ ಕಾರಣಕ್ಕೋಸ್ಕರ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಕಂಡುಬಂದಿದೆ ಎಂದು ದೂರಿದರು.
ಪ್ರತಿಯೊಂದರಲ್ಲೂ ರಾಜಕೀಯ ಲಾಭದ ಹುನ್ನಾರ, ಮತಬ್ಯಾಂಕ್ ಸಂರಕ್ಷಣೆಯ ಕಾರಣಕ್ಕೆ ಹಿಂದೆ ಕಾನೂನು ಸುವ್ಯವಸ್ಥೆಗೆ ಹೆಸರುವಾಸಿಯಾಗಿದ್ದ ಕರ್ನಾಟಕ ರಾಜ್ಯ ಇಂದು ಗೂಂಡಾ ರಾಜ್ಯವಾಗಿ ಮತ್ತು ಕೊಲೆಗಡುಕರ ರಾಜ್ಯವಾಗಿ ಪರಿವರ್ತನೆಯಾಗಿದೆ ಎಂದು ಕಿಡಿಕಾರಿದರು.