ಹೊಸದಿಗಂತ ವರದಿ, ತುಮಕೂರು:
ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಜನಪರ ಕೆಲಸಗಳು ಹಾಗೂ ಸಾಮಾಜಿಕ ನ್ಯಾಯದ ವಿಚಾರಗಳ ಕುರಿತು ಮುಂದಿನ ಪೀಳಿಗೆಯ ಜನರಿಗೆ ತಿಳಿಸಬೇಕು ಎಂದು ಗೃಹ ಸಚಿವ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿಂದು ಏರ್ಪಡಿಸಲಾಗಿದ್ದ ಡಿ. ದೇವರಾಜ ಅರಸು ರವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜಕಾರಣ ಮತ್ತು ಸಾರ್ವಜನಿಕ ಜೀವನ ಈ ಎರಡನ್ನು ನಿರ್ವಹಿಸುವ ಸಂದರ್ಭದಲ್ಲಿ ಹಲವಾರು ಸವಾಲುಗಳು ಎದುರಾಗುತ್ತವೆ. ಇವುಗಳನ್ನೆಲ್ಲ ಮೆಟ್ಟಿನಿಂತು ರಾಜ್ಯದ ಶೋಷಿತ ಹಿಂದುಳಿದ ಸಮುದಾಯಗಳನ್ನು ಸಮಾಜದ ಮುಂಚೂಣಿಗೆ ತರಬೇಕೆಂಬ ಆಶಯವನ್ನು ಇಟ್ಟುಕೊಂಡು ಕೆಲಸ ಮಾಡಿದವರು ಅರಸು ಅವರು ಎಂದರು.
ಸಂವಿಧಾನದ ಮೂಲ ಆಶಯ ಎಲ್ಲಾ ವರ್ಗದ ಜನರನ್ನು ಸಮಾನತೆಯಿಂದ ಕಾಣಬೇಕು ಎಂಬುವುದು. ಅದನ್ನು ಎಲ್ಲರೂ ಮೊದಲು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಹಿಂದುಳಿದ ವರ್ಗಗಳ ಕುಟುಂಬದವರ ಸಬಲೀಕರಣಕ್ಕೆ ಆದ್ಯತೆ
ಸಮಾಜದ ಹಿಂದುಳಿದ ವರ್ಗಗಳ ಕುಟುಂಬದವರಿಗೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಅವರನ್ನು ಸಬಲರನ್ನಾಗಿ ಮಾಡಲು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು ಎಂದು ಸ್ಮರಿಸಿದರು.
ಯಾವುದೇ ಒಂದು ಸರ್ಕಾರ ಒಳ್ಳೆಯ ಆಡಳಿತ ನೀಡುತ್ತಿದೆ ಎಂದು ಅನಿಸಬೇಕಾದರೆ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಾನು ಈ ಸಮಾಜದ ಒಂದು ಭಾಗ ಎಂದು ಅನಿಸಿದಾಗ ಮಾತ್ರ ಆ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ ಎಂದು ಹೇಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಉಳುವವನೇ ಭೂಮಿಯ ಒಡೆಯ ಎಂಬ ಭೂಸುಧಾರಣೆ ಕಾಯ್ದೆ ಜಾರಿ
ಒಂದು ಸಮುದಾಯದ ವ್ಯಕ್ತಿ ಸಾವಿರಾರು ಎಕರೆ ಭೂಮಿಯ ಮಾಲೀಕನಾಗಿದ್ದು ಅದನ್ನು ಉಳುಮೆ ಮಾಡಲು ಕೂಲಿ ಕಾರ್ಮಿಕರನ್ನು ಇಟ್ಟುಕೊಳ್ಳುತ್ತಿದ್ದನು. ಇದನ್ನು ರೈತ ದೇವರಾಜ್ ಅರಸು ಅವರು ತಮ್ಮ ಆಡಳಿತ ಅವಧಿಯಲ್ಲಿ ಉಳುವವನೇ ಭೂಮಿಯ ಒಡೆಯ ಎಂಬ ಭೂಸುಧಾರಣೆ ಕಾಯ್ದೆಯನ್ನು ಜಾರಿಗೆ ತಂದರು. ಇದರಿಂದ ಎಲ್ಲಾ ವರ್ಗದ ಜನರಿಗೂ ಭೂಮಿ ಸಿಗಲು ಸಾಧ್ಯ ವಾಯಿತು ಎಂದು ತಿಳಿಸಿದರು.
ಶಿಕ್ಷಕರ ಕೊರತೆ ನೀಗಿಸಿದರು
ರಾಜ್ಯದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದನ್ನು ಗಮನಿಸಿ, ಕೂಡಲೇ ಆಗಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವರಿಗೆ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನು ನೀಡುವಂತೆ ತಿಳಿಸಿದರು. ಖಾಲಿಯಿದ್ದ 18,000 ಶಿಕ್ಷಕರ ಹುದ್ದೆಗಳನ್ನು ಒಮ್ಮೆಲೇ ನೇಮಕ ಮಾಡಿಕೊಂಡಿರುವುದನ್ನು ಅವರ ಸ್ಮರಿಸಿದರು.
ಕಾರ್ಯಕ್ರಮದಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಜಿಎಸ್ ಬಸವರಾಜು, ಮಹಾನಗರ ಪಾಲಿಕೆ ಮಹಾಪೌರರಾದ ಪ್ರಭಾವತಿ ಸುಧಿಶ್ವರ್, ನಗರ ಶಾಸಕ ಜಿ ಬಿ ಜ್ಯೋತಿ ಗಣೇಶ್, ಜಿಲ್ಲಾಧಿಕಾರಿ ಕೆ ಶ್ರೀನಿವಾಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಮಹಾನಗರ ಪಾಲಿಕೆ ಆಯುಕ್ತರಾದ ಆಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಗಂಗಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.