ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಕಾಶಿ ಜಿಲ್ಲೆಯ ಧರಾಲಿ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಮೂರು ಗಂಟೆಗಳ ಅವಧಿಯಲ್ಲಿ ಮೂರು ಬಾರಿ ಮೇಘಸ್ಪೋಟವಾಗಿದ್ದು, ಭಾರಿ ಪ್ರವಾಹದಿಂದಾಗಿ ನಾಲ್ವರು ಸಾವನ್ನಪ್ಪಿದ್ದಾರೆ.
ಒಂಬತ್ತು ಸೇನಾ ಸಿಬ್ಬಂದಿ ಸೇರಿದಂತೆ 59 ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಭಾರತೀಯ ಸೇನೆ ಮತ್ತು ಪರಿಹಾರ ತಂಡಗಳಿಂದ ಬೃಹತ್ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
ಆರಂಭದಲ್ಲಿ ಕಣ್ಮರೆಯಾಗಿದ್ದ 11 ಸೇನಾ ಸಿಬ್ಬಂದಿಗಳಲ್ಲಿ ಇಬ್ಬರು ಸುರಕ್ಷಿತವಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಇದುವರೆಗೆ 20 ನಾಗರಿಕರನ್ನು ಸಹ ರಕ್ಷಿಸಲಾಗಿದೆ. ಭರದಿಂದ ರಕ್ಷಣಾ ಕಾರ್ಯಾಚರಣೆ ಸಾಗಿದೆ. ಪ್ರತಿಕೂಲ ಹವಾಮಾನ ಮತ್ತು ಸಂಪರ್ಕ ಕಡಿತದ ಸವಾಲಿನ ನಡುವೆ ಸೇನೆಯ ಬದ್ಧತೆಯನ್ನು ಅವರು ಶ್ಲಾಘಿಸಿದ್ದಾರೆ.
ಮೊದಲ ಮೇಘಸ್ಫೋಟದಿಂದ ಧಾರಾಲಿ ಗ್ರಾಮದ ಕಡೆಗೆ ಮಣ್ಣು, ಗುಡ್ಡ ಕುಸಿತ, ಕೆಸರು ನೀರು ಹರಿಯುವುದರೊಂದಿಗೆ ಭಾರಿ ಆತಂಕ ಸೃಷ್ಟಿಯಾಯಿತು. ಜನರು ಭಯದಿಂದ ಕಿರುಚಾಡಿದರು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.