ದೇವೇಗೌಡರು ಮೋದಿಯವರ ಚಿಯರ್ ಲೀಡರ್ ರೀತಿ ವರ್ತಿಸುತ್ತಿದ್ದಾರೆ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇವೇಗೌಡರು ನರೇಂದ್ರ ಮೋದಿಯವರ ‘ಚಿಯರ್ ಲೀಡರ್’ ರೀತಿ ವರ್ತಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಗೋದಾವರಿ- ಕಾವೇರಿ ನದಿ ಜೋಡಣೆಯಲ್ಲಿ ರಾಜ್ಯಕ್ಕೆ ಅನ್ಯಾಯ ಎಂಬ ದೇವೇಗೌಡರ ಹೇಳಿಕೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಫೋಸ್ಟ್ ಮಾಡಿರುವ ಸಿದ್ದರಾಮಯ್ಯ, ಹಿಂದೆಲ್ಲ ರಾಜ್ಯದ ಹಿತಾಸಕ್ತಿಯ ರಕ್ಷಣೆಯ ಪ್ರಶ್ನೆ ಎದುರಾದಾಗ ಒಬ್ಬ ಮುತ್ಸದ್ದಿಯಾಗಿ, ಹೆಮ್ಮೆಯ ಕನ್ನಡಿಗನಾಗಿ ರಾಜ್ಯಕ್ಕೆ ನ್ಯಾಯ ಕೊಡಲು ಹೋರಾಟ ನಡೆಸಿದ್ದನ್ನು ರಾಜ್ಯದ ಜನರು ಗಮನಿಸಿದ್ದಾರೆ. ಆದರೆ ಇತ್ತೀಚೆಗೆ ಜೆಡಿಎಸ್ ಕೇಂದ್ರ ಸರ್ಕಾರದ ವಕ್ತಾರರಂತೆ ಪಕ್ಷಪಾತಿಯಾಗಿ ವರ್ತಿಸುತ್ತಿರುವುದನ್ನು ಕೂಡಾ ಏಳು ಕೋಟಿ ಕನ್ನಡಿಗರು ಗಮನಿಸುತ್ತಿದ್ದಾರೆ. ಕೇಂದ್ರ ಸಂಪುಟದಲ್ಲಿ ಮಗನನ್ನು ಸಚಿವನನ್ನಾಗಿ ಮಾಡಲು ಗೌಡರು ಇಷ್ಟೊಂದು ರಾಜಿ ಮಾಡಿಕೊಳ್ಳುವ ಅಗತ್ಯ ಇತ್ತಾ? ಎಂದು ಜನ ಪ್ರಶ್ನಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

HD ದೇವೇಗೌಡ ಅವರೇ, ಕೃಷ್ಣಾ ಮತ್ತು ಕಾವೇರಿ ನದಿಗಳ ಜೋಡಣೆಯ ನೀರಾವರಿ ಯೋಜನೆಯ ಬಗ್ಗೆ ನಿಮ್ಮ ಕಳಕಳಿಗೆ ನಮ್ಮ ಸಂಪೂರ್ಣ ಸಹಕಾರ ಇದೆ. ಈ ವಿಷಯದಲ್ಲಿ ನೀವು ನಡೆಸುವ ಹೋರಾಟಕ್ಕೆ ನಾನು ಮತ್ತು ಡಿಕೆ ಶಿವಕುಮಾರ್ ಮಾತ್ರವಲ್ಲ ಸಮಸ್ತ ಕರ್ನಾಟಕ ನಿಮ್ಮ ಜೊತೆ ಇರುತ್ತದೆ. ಆದರೆ ಹೊಸ ನೀರಾವರಿ ಯೋಜನೆಗಳನ್ನು ಪ್ರಾರಂಭಿಸುವ ಮೊದಲು ಅಪೂರ್ಣ ಸ್ಥಿತಿಯಲ್ಲಿರುವ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಹಕಾರ ಇರಲಿ ಎಂದು ಮನವಿ ಮಾಡಿದ್ದಾರೆ.

ನೀರಾವರಿ ಮಾತ್ರವಲ್ಲದೇ, ತೆರಿಗೆ ಹಂಚಿಕೆ, ಪ್ರಕೃತಿ ವಿಕೋಪ ಪರಿಹಾರ, ಕುಡಿಯುವ ನೀರು ಪೂರೈಕೆ, ರೈಲ್ವೆ ಯೋಜನೆಗಳ ವಿಚಾರದಲ್ಲಿಯೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕರ್ನಾಟಕವನ್ನು ಶತ್ರು ರಾಜ್ಯದಂತೆ ನಡೆಸಿಕೊಳ್ಳುತ್ತಿದೆ. ಈ ವಿಚಾರಗಳು ನಿಮಗೆ ಗೊತ್ತಿರುವುದರಿಂದ ಸಂಸತ್ ನಲ್ಲಿ ಈ ಬಗ್ಗೆ ನೀವು ದನಿ ಎತ್ತುತ್ತೀರಿ ಎಂದು ರಾಜ್ಯದ ಜನರು ನಿರೀಕ್ಷಿಸಿದ್ದರು. ಕೇಂದ್ರದಲ್ಲಿ ಯಾವ ಪಕ್ಷದ ಸರ್ಕಾರ ಇದ್ದರೂ ನೀವು ಮುಲಾಜಿಗೆ ಬೀಳದೆ ಕರ್ನಾಟಕದ ಹಿತಾಸಕ್ತಿಯ ರಕ್ಷಣೆಯ ಪ್ರಶ್ನೆ ಎದುರಾದಾಗ ದನಿ ಎತ್ತುತ್ತಾ ಬಂದವರು. ಆ ಮುತ್ಸದ್ದಿ ದೇವೇಗೌಡರನ್ನು ಕಾಣಲು ಕನ್ನಡಿಗರು ಬಯಸುತ್ತಿದ್ದಾರೆ. ಆದರೆ ಈಗಿನ ದೇವೇಗೌಡರು ನರೇಂದ್ರ ಮೋದಿಯವರ ಚಿಯರ್ ಲೀಡರ್ ರೀತಿ ವರ್ತಿಸುತ್ತಿದ್ದಾರೆ ಎಂದು ವಿಷಾದದಿಂದ ಹೇಳಬೇಕಾಗಿದೆ ಎಂದಿದ್ದಾರೆ.

ದೈಹಿಕವಾಗಿ ನೀವು ಸ್ವಲ್ಪ ಕುಗ್ಗಿದಂತೆ ಕಂಡರೂ ಮಾನಸಿಕವಾಗಿ ನೀವಿನ್ನೂ ದೃಡವಾಗಿದ್ದೀರಿ. ದಯವಿಟ್ಟು ಈಗಲಾದರೂ ಪಕ್ಷ ರಾಜಕಾರಣವನ್ನು ಮೀರಿ ಒಬ್ಬ ಮುತ್ಸದ್ದಿ ನಾಯಕನ ರೀತಿಯಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆಗೆ ಮುಂದಾಗಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ. ಈ ನಿಟ್ಟಿನಲ್ಲಿ ನೀವು ಮಾಡುವ ಪ್ರಯತ್ನಕ್ಕೆ ನಮ್ಮ ಸರ್ಕಾರದ ಸಂಪೂರ್ಣ ಬೆಂಬಲ ಇದೆ. ಏಳು ಕೋಟಿ ಕನ್ನಡಿಗರೂ ನಿಮ್ಮ ಜೊತೆಯಲ್ಲಿ ಇರುತ್ತಾರೆ ಎಂಬ ಭರವಸೆಯೂ ನನಗಿದೆ ಎಂದು ಹೇಳಿದ್ದಾರೆ.

ಕೃಷ್ಣಾ ಜಲವಿವಾದ ನ್ಯಾಯಮಂಡಳಿ ಕರ್ನಾಟಕಕ್ಕೆ 173 ಟಿಎಂಸಿ ನೀರಿನ ಪಾಲನ್ನು ನೀಡಿ 2010ರಲ್ಲಿಯೇ ತೀರ್ಪು ನೀಡಿದೆ. ಆದರೆ ಕೇಂದ್ರ ಸರ್ಕಾರ ನ್ಯಾಯಮಂಡಳಿಯ ಐತೀರ್ಪನ್ನು ಗೆಜೆಟ್ ನಲ್ಲಿ ಪ್ರಕಟಿಸಲು ನಿರಾಕರಿಸುತ್ತಾ ಬಂದಿದೆ.ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿದರೆ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆಯ ಬರಪೀಡಿತ ಪ್ರದೇಶಗಳಿಗೆ ವರದಾನವಾಗಲಿದೆ.ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಪೂರೈಕೆ ಮತ್ತು 400 ಮೆಗಾವಾಟ್ ವಿದ್ಯುತ್ ಉತ್ಪಾದನೆಗಾಗಿಯೇ ಮೇಕೆದಾಟು ಯೋಜನೆಯನ್ನು ರೂಪಿಸಲಾಗಿದೆ.. ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ದೊರಕಿಸಿಕೊಟ್ಟರೆ ಬೆಂಗಳೂರು ನಿವಾಸಿಗಳು ಸದಾ ನಿಮಗೆ ಋಣಿಯಾಗಿರುತ್ತಾರೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!