ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿದಂತೆ ಏಳು ಮಂದಿ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ. ಪ್ರಕರಣ ಸಂಬಂಧ ಪೀಠದ ಮುಂದೆ ಆರೋಪಿಗಳ ಪರ ವಾದ ಮಂಡನೆಯಾಗಲಿದ್ದು, ವಿಚಾರಣೆ ನಂತರ ತೀರ್ಪು ಪ್ರಕಟವಾಗುವ ಸಾಧ್ಯತೆ ಇದೆ.
ಈ ಹಿಂದೆ ಕರ್ನಾಟಕ ಹೈಕೋರ್ಟ್ ನಟ ದರ್ಶನ್, ಪವಿತ್ರಾ ಗೌಡ ಹಾಗೂ ಇತರ ಮಂದಿಗೆ ಜಾಮೀನು ಮಂಜೂರು ಮಾಡಿತ್ತು. ಆದರೆ, ಈ ನಿರ್ಣಯವನ್ನು ಪ್ರಶ್ನಿಸಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈಗ ಈ ವಿಚಾರಣೆ ಕುರಿತು ಎಲ್ಲಾ ಕಣ್ಣುಗಳು ದೆಹಲಿ ಸುಪ್ರೀಂ ಕೋರ್ಟ್ ಮೇಲಿವೆ.
ನಟ ದರ್ಶನ್ ಪರ ವಕೀಲರಾದ ಸಿದ್ಧಾರ್ಥ ದವೆ ಅವರು ಇಂದು ಪೀಠದ ಮುಂದೆ ವಾದ ಮಂಡಿಸಲಿದ್ದಾರೆ. ಮಂಗಳವಾರವೇ ವಿಚಾರಣೆ ಮುಗಿಯಬೇಕಿತ್ತು. ಆದರೆ, ಅಂದು ಸಿದ್ಧಾರ್ಥ ದವೆ ನ್ಯಾಯಾಲಯದ ಮುಂದೆ ಹಾಜರಾಗಿ, “ಈ ಪ್ರಕರಣ ನಿನ್ನೆ ರಾತ್ರಿ ನನಗೆ ವಹಿಸಲ್ಪಟ್ಟಿದೆ. ಹೆಚ್ಚಿನ ಅಧ್ಯಯನ ಮಾಡಲು ನನಗೆ ಸಮಯ ಬೇಕು,” ಎಂದು ವಿನಂತಿಸಿದ್ದರು.
ಈ ಮನವಿಗೆ ಸ್ಪಂದಿಸಿದ ನ್ಯಾಯಮೂರ್ತಿ ಪಾರ್ದಿವಾಲ ನೇತೃತ್ವದ ದ್ವಿಸದಸ್ಯ ಪೀಠ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತ್ತು. ಇದಕ್ಕೂ ಮುನ್ನ, ಪೀಠವು ಲಿಖಿತ ರೂಪದಲ್ಲಿ ದಾಖಲೆಗಳ ಸಿದ್ಧತೆ ಹಾಗೂ ಶೇಕಡಾ 75ರಷ್ಟು ವಾದ ಮಂಡನೆಯನ್ನೂ ಲಿಖಿತದಲ್ಲಿ ಸಲ್ಲಿಸಲು ಸೂಚನೆ ನೀಡಿತ್ತು.
ಇಂದಿನ ಸುಪ್ರೀಂ ಕೋರ್ಟ್ ವಿಚಾರಣೆಯ ತೀರ್ಪಿನಿಂದ ಪ್ರಕರಣದ ಮುಂದಿನ ದಿಕ್ಕು ನಿರ್ಧಾರವಾಗುವ ಸಾಧ್ಯತೆ ಇದೆ.