ದಿನದ 24 ಗಂಟೆಯಲ್ಲಿ ಒಂದು ಗಂಟೆಯಾದ್ರೂ ಯೋಗಕ್ಕೆ ಮೀಸಲಿಡಿ: ಡಾ.ಗುರುರಾಜ ಸುಂಕದ

ಹೊಸದಿಗಂತ ವರದಿ ರಾಯಚೂರು :

ಯೋಗ ಮಾಡಿದವರು ನಿರೋಗಿ ಎಂಬ ಸತ್ಯವನ್ನು ಅರಿತಿದ್ದ ನಮ್ಮ ಸಂತರು, ಋಷಿಮುನಿಗಳು ಯೋಗವನ್ನು ಮಾಡುವ ಮೂಲಕ ದೀರ್ಘಾಯುಷಿಗಳಾಗಿ ಜೀವಿಸುತ್ತಿದ್ದರು. ಪ್ರಸ್ತುತ ಎಲ್ಲರೂ ಪ್ರತಿ ನಿತ್ಯ ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ರಾಯಚೂರು ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಡೀನ್ ಡಾ.ಗುರುರಾಜ ಸುಂಕದ ಹೇಳಿದರು.

ವಿಶ್ವ ಯೋಗ ದಿನದ ಅಂಗವಾಗಿ ಬುಧವಾರ ನಗರದ ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ವಿವಿ ಹಾಗೂ ಪತಂಜಲಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಯೋಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದು ತಾಂತ್ರಿಕತೆ ವೇಗವಾಗಿ ಬೆಳೆಯುತ್ತಿದೆ. ಅದರೊಂದಿಗೆ ಮನುಷ್ಯರ ಜೀವನ ಶೈಲಿಯೂ ಬದಲಾಗುತ್ತಿದೆ. ಬದಲಾಗುತ್ತಿರುವ ಬದುಕಿನ ಪದ್ಧತಿಯಲ್ಲಿ ಒತ್ತಡದ ಹಾಗೂ ಯಾಂತ್ರಿಕೃತ ಜೀವನ ಶೈಲಿ ಅಳವಡಿಕೆಯಾಗಿ ಬಹುತೇಕರ ಆರೋಗ್ಯದಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಇವನ್ನು ದೂರಮಾಡಿಕೊಳ್ಳುವುದಕ್ಕೆ ದೈಹಿಕ ಶ್ರಮ ಅತ್ಯಗತ್ಯ ಎಂದರು.

ಪ್ರತಿ ನಿತ್ಯ ಯೋಗ, ವಾಕಿಂಗ್ ಸೇರಿದಂತೆ ಇನ್ನಿತರ ವ್ಯಾಯಾಮವನ್ನು ಮಾಡುವದರಿಂದ ದೇಹ ಮತ್ತು ಮನಸ್ಸನ್ನು ಸದೃಢವಾಗಿಟ್ಟುಕೊಳ್ಳುವುದಲ್ಲದೆ ಆರೋಗ್ಯವಂತರಾಗಿಯೂ ಇರುವುದಕ್ಕೆ ಗಮನಕೊಡಬೇಕು. ದೇಶದ ಪ್ರಗತಿ ಪ್ರತಿಯೊಬ್ಬ ಪ್ರಜೆಯ ಆರೋಗ್ಯದ ಮೇಲೆ ಅವಲಂಬಿತವಾಗಿದೆ. ದೇಶದ ಜನತೆ ಆರೋಗ್ಯವಾಗಿದ್ದರೆ ಕೃಷಿ, ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧ್ಯವಾಗಿ ದೇಶ ಎಲ್ಲ ರಂಗಗಳಲ್ಲಿಯೂ ಸ್ವಾವಲಂಬಿಯಾಗುತ್ತದೆ ಎಂದು ತಿಳಿಸಿದರು.

ಯೋಗ ಎಂಬ ಪದ ಸಂಸ್ಕೃತದ್ದು, ಯೋಗ ಎಂದರೆ ಐಕ್ಯ ಆಗುವುದು. ಮಾನವನ ಮನಸ್ಸು ಮತ್ತು ದೇಹ ಐಕ್ಯವಾದಾಗ ಉತ್ತಮ ಆರೋಗ್ಯ ಹಾಗೂ ಕೆಲಸ ಕಾರ್ಯಗಳನ್ನು ಮಾಡುವುದಕ್ಕೆ ಸಾಧ್ಯವಾಗುತ್ತದೆ. ಹೀಗಾಗಿ ನಮ್ಮ ಸಾಧು ಸಂತರು ಯೋಗವನ್ನು ಮಾಡುವ ಮೂಲಕ ತಮ್ಮ ಮನಸ್ಸನ್ನು ಹಾಗೂ ದೇಹವನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳುತ್ತಿದ್ದರು ಆದ್ದರಿಂದ ಪ್ರತಿ ನಿತ್ಯ ಸ್ವಲ್ಪ ಸಮಯವನ್ನಾದರೂ ಯೋಗ ಮತ್ತು ವ್ಯಾಯಾಮಕ್ಕೆ ಎಲ್ಲರೂ ಮೀಸಡುವಂತೆ ಕರೆ ನೀಡಿದರು.

ವಿವಿಯ ದೈಹಿಕ ವಿಭಾಗದ ಉಪ ನಿರ್ದೇಶಕ ಡಾ. ರಾಜಣ್ಣ ಮಾತನಾಡಿ, ದಿನಕ್ಕೊಂದು ಗಂಟೆ ವ್ಯಾಯಾಮ ದಿನವಿಡೀ ದೇಹಕ್ಕೆ ಆರಾಮ. ದೇಶದ ಸಂಪತ್ತುಗಳಲೆಲ್ಲ ದೇಹದ ಸಂಪತ್ತು ಶ್ರೇಷ್ಠ. ಸೊಂಟದ ಸುತ್ತಳತೆ ಹೆಚ್ಚಾದಂತೆ ಆಯುಷ್ಯವೂ ಕಡಿಮೆ ಆಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಸೊಂಟದ ಸುತ್ತಳತೆಯನ್ನು ಕಡಿಮೆ ಮಾಡಿಕೊಂಡು ಆಯುಷ್ಯವನ್ನು ಹೆಚ್ಚಿಸಿಕೊಳ್ಳಿ. ದಿನದ ಒಂದು ಗಂಟೆಯಾದರೂ ವ್ಯಾಯಾಮಕ್ಕೆ ಮೀಸಲಿಡಿ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!