ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲದಲ್ಲಿ ಪ್ರತಿದಿನ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ಪವಿತ್ರ ಮುಂಡನ ಸೇವೆಗೆ ಮಹತ್ವದ ಸಹಾಯ ದೊರೆತಿದೆ. ಹೈದರಾಬಾದ್ ಮೂಲದ ಉದ್ಯಮಿ ಬಿ. ಶ್ರೀಧರ್ ಅವರು ತಿರುಮಲ ತಿರುಪತಿ ದೇವಸ್ಥಾನ ಮಂಡಳಿಗೆ (ಟಿಟಿಡಿ) ಸುಮಾರು ₹1.2 ಕೋಟಿ ಮೌಲ್ಯದ ಅರ್ಧ ಬ್ಲೇಡ್‌ಗಳನ್ನು ದಾನ ಮಾಡಿದ್ದಾರೆ. ಈ ದೇಣಿಗೆಯಿಂದ ಕಲ್ಯಾಣಕಟ್ಟೆಗಳಲ್ಲಿ ನಡೆಯುವ ಕ್ಷೌರ ಸೇವೆಯ ವಾರ್ಷಿಕ ಅಗತ್ಯ ಸಂಪೂರ್ಣವಾಗಿ ಪೂರೈಸಲಿದೆ ಎಂದು ಟಿಟಿಡಿ ತಿಳಿಸಿದೆ.
ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರು ಈ ಕುರಿತು ಪ್ರತಿಕ್ರಿಯಿಸಿ, ಭಕ್ತರ ಮುಂಡನ ಸೇವೆಗೆ ವರ್ಷಕ್ಕೆ ಕೋಟ್ಯಂತರ ರೂ. ವೆಚ್ಚವಾಗುತ್ತದೆ ಎಂದರು. ಪ್ರತಿದಿನ ಸರಾಸರಿ 40 ಸಾವಿರಕ್ಕೂ ಹೆಚ್ಚು ಅರ್ಧ ಬ್ಲೇಡ್‌ಗಳು ಬಳಸಲಾಗುತ್ತಿದ್ದು, ಶ್ರೀಧರ್ ಅವರ ದೇಣಿಗೆ ಇಡೀ ವರ್ಷದ ಅವಶ್ಯಕತೆಯನ್ನು ಪೂರೈಸುತ್ತದೆ ಎಂದು ಅವರು ಹೇಳಿದರು.
ತಿರುಮಲದಲ್ಲಿ ಟಿಟಿಡಿ ನಿರ್ವಹಣೆಯಲ್ಲಿರುವ ಪ್ರಮುಖ ಹಾಗೂ ಒಂಬತ್ತು ಮಿನಿ ಕಲ್ಯಾಣಕಟ್ಟೆಗಳಲ್ಲಿ ಸಾವಿರಕ್ಕೂ ಹೆಚ್ಚು ಕ್ಷೌರಿಕರು ದಿನದ 24 ಗಂಟೆಗಳೂ ಸೇವೆ ಸಲ್ಲಿಸುತ್ತಿದ್ದಾರೆ. ಭಕ್ತರು ತಮ್ಮ ಹರಕೆ ನೆರವೇರಿಸಲು ಮತ್ತು ವೆಂಕಟೇಶ್ವರನಿಗೆ ಶರಣಾಗಲು ತಲೆ ಬೋಳಿಸುವ ಸಂಪ್ರದಾಯವನ್ನು ಪಾಲಿಸುತ್ತಾರೆ.

