ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಚಳಿಗಾಲ ಆರಂಭವಾಗುವ ಕಾರಣ ಅಯೋಧ್ಯೆ ರಾಮಮಂದಿರದಲ್ಲಿ ದರುಶನ ಸಮಯವನ್ನು ಬದಲಾಯಿಸಲಾಗಿದೆ. ಅಯೋಧ್ಯೆಯ ರಾಮ ಮಂದಿರಕ್ಕೆ ಪ್ರತಿದಿನ, ಹೆಚ್ಚಿನ ಸಂಖ್ಯೆಯ ಭಕ್ತರು ರಾಮ ಲಾಲ್ ದರುಶನ ಪಡೆಯಲು ಭೇಟಿ ನೀಡುತ್ತಾರೆ. ಆದರೆ, ಈಗ ದೇವಾಲಯದ ಟ್ರಸ್ಟ್ ರಾಮ ಮಂದಿರದಲ್ಲಿ ದರುಶನ ಮತ್ತು ಆರತಿಯ ಸಮಯವನ್ನು ಮತ್ತೊಮ್ಮೆ ಬದಲಾಯಿಸಿರುವುದಾಗಿ ಘೋಷಿಸಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಬಿಡುಗಡೆ ಮಾಡಿದ ವೇಳಾಪಟ್ಟಿಯಲ್ಲಿ, ಶರತ್ಕಾಲದ ದೃಷ್ಟಿಯಿಂದ ರಾಮ ದೇವಾಲಯದ ಬಾಗಿಲು ತೆರೆಯುವ ಮತ್ತು ಮುಚ್ಚುವ ಸಮಯವನ್ನು ಬದಲಾಯಿಸಲಾಗಿದೆ ಎಂದು ಹೇಳಲಾಗಿದೆ. ಈ ಮೊದಲು ದೇವಾಲಯದಲ್ಲಿ ಬೆಳಿಗ್ಗೆ 4 ಗಂಟೆಗೆ ನಡೆಯುತ್ತಿದ್ದ ಮಂಗಳಾರತಿ ಈಗ ಬೆಳಿಗ್ಗೆ 4.30ಕ್ಕೆ ಪ್ರಾರಂಭವಾಗುತ್ತದೆ. ಬೆಳಿಗ್ಗೆ 6 ಗಂಟೆಗೆ ನಡೆಯುತ್ತಿದ್ದ ಶೃಂಗಾರ ಆರತಿ ಈಗ ಬೆಳಿಗ್ಗೆ 6.30ಕ್ಕೆ ನಡೆಯಲಿದೆ.
ದೇವಾಲಯದ ಬಾಗಿಲು ಭಕ್ತರಿಗೆ ಬೆಳಿಗ್ಗೆ 6.30ಕ್ಕೆ ತೆರೆಯುತ್ತಿದ್ದವು. ಆದರೆ, ಇಂದಿನಿಂದ ಅವು ಬೆಳಿಗ್ಗೆ 7 ಗಂಟೆಗೆ ತೆರೆಯುತ್ತವೆ. ರಾತ್ರಿಯ ದೇವಾಲಯದ ಮುಚ್ಚುವ ಸಮಯ ಬದಲಾಗಿಲ್ಲ. ದೇವಾಲಯದ ಬಾಗಿಲುಗಳು ಹಿಂದಿನಂತೆ ರಾತ್ರಿ 9.30ಕ್ಕೆ ಮುಚ್ಚಲ್ಪಡುತ್ತವೆ. ದೇವಾಲಯದ ಬಾಗಿಲುಗಳು ಮಧ್ಯಾಹ್ನ 12.30ರಿಂದ 1ರವರೆಗೆ ಮುಚ್ಚಿರುತ್ತವೆ. ಈ ಸಮಯದಲ್ಲಿ ಯಾವುದೇ ಭಕ್ತರಿಗೆ ರಾಮಲಲ್ಲಾಗೆ ಭೇಟಿ ನೀಡಲು ಅವಕಾಶವಿರುವುದಿಲ್ಲ.

