ಹೊಸದಿಗಂತ ಡಿಜಿಟಲ್ ಡೆಸ್ಕ್:
ಬುಧವಾರ ಸಂಜೆ ನಡೆದ ಅಹಿತಕರ ಘಟನೆ ಬಳಿಕ ಧರ್ಮಸ್ಥಳ ಪರಿಸರದ ಪಾಂಗಳ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದ್ದು, ಎಲ್ಲವೂ ಈಗ ಸಹಜಸ್ಥಿತಿಗೆ ಮರಳುತ್ತಿದೆಯಾದರೂ ಪರಿಸ್ಥಿತಿ ಮಾತ್ರ ಇನ್ನೂ ಬೂದಿಮುಚ್ಚಿದ ಕೆಂಡದಂತಿದೆ.
ಈ ನಡುವೆ ಬೆಳ್ತಂಗಡಿ ಠಾಣೆಯಲ್ಲಿ ಮಹೇಶ್ ತಿಮರೋಡಿ, ಗಿರೀಶ್ ಮಟ್ಟೆಣ್ಣವರ್, ಸಮೀರ್ ಎಂ.ಡಿ. ಎಂಬವರ ಸಹಿತ ಕೆಲವರ ಮೇಲೆ ದೂರು ದಾಖಲಿಸಲಾಗಿದೆ. ಸುದ್ದಿ ಸಂಗ್ರಹಕ್ಕೆ ತೆರಳಿದ್ದ ವೇಳೆ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪತ್ರಕರ್ತರೋರ್ವರು ಈ ದೂರನ್ನು ದಾಖಲಿಸಿದ್ದಾರೆ.
ವ್ಯಕ್ತಿಯೊಬ್ಬರ ಸಂದರ್ಶನ ಚಿತ್ರೀಕರಿಸುತ್ತಿದ್ದ ಮೂವರು ಯೂಟ್ಯೂಬ್ ಮಾಧ್ಯಮದವರ ಬಳಿ ಗುಂಪೊಂದು ಆಕ್ಷೇಪವೆತ್ತಿದ್ದು ಬಳಿಕ ಮಾತಿನ ಚಕಮಕಿ ನಡೆದು ಇದು ಹಲ್ಲೆಯ ಹಂತ ತಲುಪಿತ್ತು. ಇದಾದ ಬೆನ್ನಿಗೇ ಪರಿಸ್ಥಿತಿ ಉದ್ವಿಗ್ನಗೊಂಡು ಲಘು ಲಾಠಿ ಪ್ರಹಾರ ನಡೆಸಿ ಪೊಲೀಸರು ಗುಂಪು ಚದುರಿಸಿದ್ದರು. ಅದಾದ ಬಳಿಕ ಯೂಟ್ಯೂಬ್ ಮಾಧ್ಯಮದ ಗಾಯಾಳು ದಾಖಲಾಗಿದ್ದ ಆಸ್ಪತ್ರೆಯಲ್ಲಿ ಪತ್ರಕರ್ತರೋರ್ವರ ಮೇಲೆ ಹಲ್ಲೆ ನಡೆದಿದೆ ಎಂದು ಅರೋಪಿಸಲಾಗಿದೆ.
ಇತ್ತ ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ವ್ಯಾಪಕ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕಾನೂನು ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಧರ್ಮಸ್ಥಳ ಗ್ರಾಮಸ್ಥರು, ಶ್ರೀಕ್ಷೇತ್ರದ ಪ್ರಮುಖರ ಜೊತೆ ಮಾತುಕತೆ ನಡೆಸಿದ್ದಾರೆ.
ಒಟ್ಟಿನಲ್ಲಿ ಬೂದಿಮುಚ್ಚಿದ ಕೆಂಡದಂತಿರುವ ಧರ್ಮಸ್ಥಳ ಗ್ರಾಮದಲ್ಲಿ ಇವೆಲ್ಲವುಗಳ ನಡುವೆ ಶವ ಹೂತುಹಾಕಲಾಗಿದೆ ಎಂಬ ಅನಾಮಿಕನ ದೂರಿಗೆ ಸಂಬಂಧಿಸಿ ಎಸ್ ಐಟಿ ತನಿಖೆ ಮುಂದುವರಿದಿದೆ.