Sunday, December 7, 2025

CINE | ‘ಧುರಂಧರ್’ ಕಲೆಕ್ಷನ್ ಗೆ ಸಿಕ್ತಿಲ್ಲ ಬ್ರೇಕ್! ವಿವಾದದ ಸುಳಿಗೆ ಸಿಲುಕಿದ್ರೂ ರಣವೀರ್ ಅಬ್ಬರ ಮಾತ್ರ ಕಡಿಮೆ ಆಗಿಲ್ಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಡುಗಡೆಯ ಮೊದಲ ದಿನಗಳಿಂದಲೇ ಅಚ್ಚರಿ ಮೂಡಿಸಿರುವ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ, ಮಾತಿನ ವಿವಾದಗಳನ್ನೆಲ್ಲ ಹಿಂದಿಕ್ಕಿ ಬಾಕ್ಸ್‌ಆಫೀಸ್‌ನಲ್ಲಿ ದಿಟ್ಟ ಪ್ರದರ್ಶನ ನೀಡುತ್ತಿದೆ. ರಿಲೀಸ್‌ಗೆ ಮುನ್ನ ನಿರೀಕ್ಷೆ ಕಡಿಮೆ ಇದ್ದರೂ, ಸಿನಿಮಾ ಬಿಡುಗಡೆಯಾದ ಬಳಿಕ ಪ್ರೇಕ್ಷಕರ ಸ್ಪಂದನೆ ಸಂಪೂರ್ಣವಾಗಿ ಬದಲಾಗಿದೆ. ಅದರ ಪರಿಣಾಮವಾಗಿ ಈ ಸಿನಿಮಾ ಎರಡು ದಿನಗಳಲ್ಲೇ ದೊಡ್ಡ ಗಳಿಕೆಯತ್ತ ದಾಪುಗಾಲು ಇಟ್ಟಿದೆ.

ಶುಕ್ರವಾರ ಬಿಡುಗಡೆಯಾದ ‘ಧುರಂಧರ್’ ಮೊದಲ ದಿನವೇ 27 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಉತ್ತಮ ಆರಂಭ ಪಡೆದುಕೊಂಡಿತು. ಎರಡನೇ ದಿನವಾದ ಶನಿವಾರ ಈ ಮೊತ್ತ ಮತ್ತಷ್ಟು ಹೆಚ್ಚಾಯಿತು. ವರದಿಗಳ ಪ್ರಕಾರ, ಶನಿವಾರ ರಾತ್ರಿ 10 ಗಂಟೆಯೊಳಗೆ ಸಿನಿಮಾ 31 ಕೋಟಿ ರೂಪಾಯಿ ಗಳಿಸಿದೆ. ಇದರಿಂದ ಎರಡು ದಿನಗಳ ಒಟ್ಟು ಕಲೆಕ್ಷನ್ 58 ಕೋಟಿ ರೂಪಾಯಿ ತಲುಪಿದ್ದು, ಚಿತ್ರತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಇತ್ತೀಚೆಗೆ ‘ಕಾಂತಾರ: ಚಾಪ್ಟರ್ 1’ ಕುರಿತು ರಣವೀರ್ ಸಿಂಗ್ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಅದರಿಂದ ‘ಧುರಂಧರ್’ ಬಿಡುಗಡೆಗೆ ಹಾನಿಯಾಗಬಹುದು ಎನ್ನಲಾಗಿತ್ತು. ಆದರೆ ಪ್ರೇಕ್ಷಕರು ಸಿನಿಮಾವನ್ನೇ ಮೊದಲಿಗೆ ಇಟ್ಟುಕೊಂಡಿರುವುದು ಈಗ ಸ್ಪಷ್ಟವಾಗಿದೆ.

ಭಾನುವಾರ ಹೆಚ್ಚಿನ ಪ್ರೇಕ್ಷಕರು ಚಿತ್ರಮಂದಿರಗಳತ್ತ ಹರಿದುಬರಲಿರುವುದರಿಂದ ಮೂರನೇ ದಿನವೂ ಕಲೆಕ್ಷನ್ ಏರಿಕೆ ಆಗುವುದು ಖಚಿತ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

error: Content is protected !!