ಹೊಸದಿಗಂತ ವರದಿ ಮಂಗಳೂರು:
ಅಳುವ ಮಕ್ಕಳ ಬಾಯನ್ನು ಮುಚ್ಚಿಸೋದಕ್ಕೆ ಚಾಕೋಲೆಟ್ ಕೊಡುತ್ತೀರಿ, ಅಡುಗೆ ರೆಡಿಯಾಗೋಕೆ ಸಮಯ ಬೇಕು ಎಂದಾದರೆ ಬಿಸ್ಕೆಟ್ ಕೊಡ್ತೀರಿ. ಶಾಲೆಯಲ್ಲಿ ದಿನಕ್ಕೊಂದು ಮಗುವಿನ ಬರ್ಥ್‌ಡೇ ಅಂದ್ರೂ ಬಾಯಿ ಸಿಹಿ, ನೆಂಟರು, ಪರಿಚಯದವರು ಯಾರೇ ಮನೆಗೆ ಬಂದರೂ ಕೈಯಲ್ಲೊಂದು ಚಾಕೋಲೆಟ್, ಬಿಸ್ಕೆಟ್, ಚಿಪ್ಸ್ ಕಡ್ಡಾಯ!!
ಹೀಗಿರುವಾಗ ಮಕ್ಕಳಲ್ಲಿ ಡಯಾಬಿಟಿಸ್, ಸ್ಥೂಲಕಾಯ ಹೆಚ್ಚಾಗೋದು ಮಾಮೂಲಿಯಂತಾಗಿಬಿಟ್ಟಿದೆ! ಹೌದು,
ಕರಾವಳಿಯಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಮಕ್ಕಳ ಡಯಾಬಿಟಿಸ್ ಹಾಗೂ ಸ್ಥೂಲಕಾಯದ ಸಮಸ್ಯೆ ಶೇ.20ರಿಂದ 30ರಷ್ಟು ಏರಿಕೆಯಾಗಿರುವುದು ಸಹಜವಾಗಿಯೇ ಮಕ್ಕಳ ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಮಕ್ಕಳ ಡಯಾಬಿಟಿಸ್ ಪ್ರಕರಣಗಳು ತುಸು ಆತಂಕಕಾರಿ ಮಟ್ಟದಲ್ಲಿ ಏರಿಕೆ ಕಂಡಿದೆ. ಸಾಮಾನ್ಯವಾಗಿ 4-16 ವರ್ಷದ ಮಕ್ಕಳಲ್ಲಿ ಹೆಚ್ಚಾಗಿ ಈ ಸಮಸ್ಯೆ ಹೆಚ್ಚಾಗಿದೆ ಎನ್ನುತ್ತಾರೆ ಕೆಎಂಸಿ ಆಸ್ಪತ್ರೆಯ ತಜ್ಞ ವೈದ್ಯ ಡಾ. ಶ್ರೀನಾಥ್ ಶೆಟ್ಟಿ.
ಟೈಪ್ 1 ಪ್ರಕರಣಗಳು ಹೆಚ್ಚು
ಆಟೋ ಇಮ್ಯೂನ್ ಸಮಸ್ಯೆಯಾಗಿರುವ ಟೈಪ್ 1 ಡಯಾಬಿಟಿಸ್ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಈ ಟೈಪ್ 1 ಡಯಾಬಿಟಿಸ್‌ಗೆ ಆಹಾರ ಪದ್ಧತಿಗಿಂತಲೂ ಹೆಚ್ಚಾಗಿ ಹೊರಗಿನ ವಾತಾವರಣದಲ್ಲಿರುವ ಕೆಲವು ಸೋಂಕುಗಳು ಕಾರಣವಾಗುತ್ತವೆ.
ಈ ಸಮಸ್ಯೆಗೆ ಇನ್ಸುಲಿನ್ ಮಾತ್ರವೇ ಪರಿಹಾರವಾಗಿದೆ. ಈ ಪ್ರಕರಣಗಳಲ್ಲಿ ನಿರಂತರ ಇನ್ಸುಲಿನ್ ತೆಗೆದುಕೊಳ್ಳುವ ಅನಿವಾರ್ಯತೆ ಹೆಚ್ಚಾಗಿರುತ್ತದೆ. ಇಂತಹ ಪ್ರಕರಣಗಳಲ್ಲಿ ಏರಿಕೆಯಾಗಿರುವುದು ಕೊಂಚ ಆತಂಕಕಾರಿ ಎನ್ನುತ್ತಾರೆ ವೈದ್ಯರು.
ಟೈಪ್ 2 ಅಂದರೇನು?
ಟೈಪ್ 2 ಡಯಾಬಿಟಿಸ್ ಎಂದರೆ ದೇಹವು ಇನ್ಸುಲಿನ್ ಅನ್ನು ಸರಿಯಾಗಿ ಬಳಸಲು ಸಾಧ್ಯವಾಗದ ಸ್ಥಿತಿ. ಇದರಿಂದಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ. ಇನ್ಸುಲಿನ್ ಒಂದು ಹಾರ್ಮೋನ್ ಆಗಿದ್ದು, ಅದು ಜೀವಕೋಶಗಳಿಗೆ ಗ್ಲೂಕೋಸ್ ಅನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ. ಟೈಪ್ 2 ಡಯಾಬಿಟಿಸ್ ಸಾಮಾನ್ಯವಾಗಿ ವಯಸ್ಕರಲ್ಲಿ ಕಂಡುಬರುತ್ತದೆ, ಆದರೆ ಈ ಸಮಸ್ಯೆಯೂ ಇತ್ತೀಚೆಗೆ ಮಕ್ಕಳಲ್ಲಿಯೂ ಹೆಚ್ಚುತ್ತಿದೆ.
ಸ್ಥೂಲಕಾಯ ಸಮಸ್ಯೆ
ಒಬೆಸಿಟಿ ಅಥವಾ ಸ್ಥೂಲಕಾಯ ಸಮಸ್ಯೆ ಕೂಡ ಈಗಿನ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬಂದಿದೆ. ಮಕ್ಕಳಲ್ಲಿ ಸಾಮಾನ್ಯಕ್ಕಿಂತ 5-10 ಕೆಜಿ ಅಧಿಕ ತೂಕ ಕಂಡುಬರುತ್ತಿದೆ. ಇಂತಹ ಸಮಸ್ಯೆಗೆ ಮಕ್ಕಳ ಜೀವನಶೈಲಿ ಮುಖ್ಯ ಕಾರಣ ಎನ್ನುತ್ತಾರೆ ತಜ್ಞರು. ಸಾಫ್ಟ್ ಡ್ರಿಂಕ್ಸ್‌ಗಳ ಸೇವನೆ, ಸಕ್ಕರೆ ಪ್ರಮಾಣ ಅಧಿಕವಾಗಿರುವ ಸಿಹಿ ತಿನಿಸು, ಜಂಕ್ ಫುಡ್ ಮೇಲೆ ಹೆಚ್ಚಿನ ಅವಲಂಬನೆ, ತಡವಾಗಿ ಊಟ, ತಿಂಡಿ ಸೇವನೆ ಅಥವಾ ನಿರಂತರ ಹೊರಗಿನ ತಿಂಡಿಗಳನ್ನು ತಿನ್ನುವುದು ಡಯಾಬಿಟಿಸ್ ಸಮಸ್ಯೆಗೆ ಮುಖ್ಯಕಾರಣವಾಗಿದೆ.
ಅಲ್ಲದೆ ಮಕ್ಕಳಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗಿರುವುದು. ಮನೆಯಲ್ಲಿ ಟಿವಿ, ವಿಡಿಯೋಗೇಮ್‌ಗಳಂತಹ ಚಟುವಟಿಕೆಯಲ್ಲಿ ಹೆಚ್ಚಿನ ಸಮಯ ಕಳೆಯುವುದು, ವಾಕಿಂಗ್, ವ್ಯಾಯಾಮಗಳತ್ತ ಮಕ್ಕಳು ಹೆಚ್ಚಾಗಿ ಗಮನ ಹರಿಸದೇ ಇರುವುದು ಬೊಜ್ಜು ಸಮಸ್ಯೆಗೆ ಕಾರಣವಾಗುತ್ತಿದೆ ಎನ್ನುತ್ತಾರೆ ವೈದ್ಯರು.
ಪೋಷಕರ ಪಾತ್ರ ಏನು?
ಸ್ಥೂಲಕಾಯ ಮತ್ತು ಡಯಾಬಿಟಿಸ್ ಕುರಿತು ಮಕ್ಕಳ ಪೋಷಕರಲ್ಲಿಯೂ ಈ ಕುರಿತು ಅರಿವು ಹೆಚ್ಚಾಗಿದ್ದು ಪರೀಕ್ಷೆಗೆ ಒಳಪಡುವವರ ಸಂಖ್ಯೆಯೂ ಹೆಚ್ಚಿದೆ. ಇದರಿಂದ ಆರಂಭಿಕ ಹಂತದಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲು ನೆರವಾಗುತ್ತಿದೆ. ಮಕ್ಕಳು ಹಠ ಮಾಡಿದ ತಕ್ಷಣ ಸಿಹಿತಿಂಡಿ, ಅನಾರೋಗ್ಯಕರ ತಿಂಡಿಗಳನ್ನು ನೀಡುವ ಬದಲು, ಮನೆಯಲ್ಲಿಯೇ ರುಚಿಯಾದ ಆಹಾರ ತಿನ್ನಿಸಬಹುದು ಎಂದು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಎಂಡೋಕ್ರೊನಾಲಾಜಿಸ್ಟ್ ಡಾ.ಶ್ರೀನಾಥ್ ಶೆಟ್ಟಿ ಮಾಹಿತಿ ನೀಡಿದ್ದಾರೆ.