ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾದ ಪ್ರತಿಷ್ಠಿತ ಬಿಗ್ ಬ್ಯಾಷ್ ಲೀಗ್ ನಲ್ಲಿ ಪಾಕಿಸ್ತಾನದ ಸ್ಟಾರ್ ಬ್ಯಾಟರ್‌ಗಳಾದ ಬಾಬರ್ ಆಝಂ ಮತ್ತು ಮೊಹಮ್ಮದ್ ರಿಜ್ವಾನ್ ಅವರ ಕಳಪೆ ಪ್ರದರ್ಶನ ಮುಂದುವರೆದಿದೆ. ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾದ ಚುಟುಕು ಕ್ರಿಕೆಟ್‌ನಲ್ಲಿ, ಈ ಇಬ್ಬರು ದಿಗ್ಗಜರು ಏಕದಿನ ಅಥವಾ ಟೆಸ್ಟ್ ಮಾದರಿಯಲ್ಲಿ ಬ್ಯಾಟ್ ಬೀಸುತ್ತಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಭಾನುವಾರ ನಡೆದ ಸಿಡ್ನಿ ಸಿಕ್ಸರ್ಸ್ ಮತ್ತು ಹೋಬಾರ್ಟ್ ಹರಿಕೇನ್ಸ್ ನಡುವಿನ ಪಂದ್ಯದಲ್ಲಿ ಬಾಬರ್ ಆಝಂ ಅವರ ನಿಧಾನಗತಿಯ ಆಟ ಮತ್ತೆ ಮುನ್ನೆಲೆಗೆ ಬಂದಿದೆ. ಮಳೆಯಿಂದಾಗಿ ಕೇವಲ 5 ಓವರ್‌ಗಳಿಗೆ ಸೀಮಿತಗೊಂಡ ಈ ಪಂದ್ಯದಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಇನ್ನಿಂಗ್ಸ್ ಆರಂಭಿಸಿದ ಬಾಬರ್, 14 ಎಸೆತಗಳಲ್ಲಿ ಗಳಿಸಿದ್ದು ಕೇವಲ 9 ರನ್. ಅತ್ತ ಟೆಸ್ಟ್ ಸರಣಿ ಮುಗಿಸಿ ಬಂದಿರುವ ಸ್ಟೀವ್ ಸ್ಮಿತ್ 16 ಎಸೆತಗಳಲ್ಲಿ 19 ರನ್ ಗಳಿಸಿ ಆಕ್ರಮಣಕಾರಿ ಸೂಚನೆ ನೀಡಿದರೆ, ಬಾಬರ್ ರನ್ ಗಳಿಸಲು ಪರದಾಡಿದರು.
ಪ್ರಸಕ್ತ ಟೂರ್ನಿಯಲ್ಲಿ ಬಾಬರ್ ಅವರ ಅಂಕಿ-ಅಂಶಗಳು:
ಇನ್ನಿಂಗ್ಸ್: 8
ಒಟ್ಟು ರನ್: 154
ಸ್ಟ್ರೈಕ್ ರೇಟ್: 104.05
ಸ್ಟ್ರೈಕ್ ರೇಟ್ ವಿಷಯದಲ್ಲಿ ಲೀಗ್‌ನಲ್ಲಿ ಅವರು 66ನೇ ಸ್ಥಾನದಲ್ಲಿದ್ದಾರೆ. ಅಚ್ಚರಿಯೆಂದರೆ ಟೂರ್ನಿಯ ಹಲವು ಬೌಲರ್‌ಗಳು ಬಾಬರ್‌ಗಿಂತ ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಮೆಲ್ಬೋರ್ನ್ ರೆನೆಗೇಡ್ಸ್ ಪರ ಆಡುತ್ತಿರುವ ಮೊಹಮ್ಮದ್ ರಿಜ್ವಾನ್ ಕೂಡ ತಂಡಕ್ಕೆ ಹೊರೆಯಾಗುತ್ತಿದ್ದಾರೆ. 7 ಇನ್ನಿಂಗ್ಸ್‌ಗಳಲ್ಲಿ ಕೇವಲ 141 ರನ್ ಗಳಿಸಿರುವ ಅವರು, 100ರ ಸ್ಟ್ರೈಕ್ ರೇಟ್ ದಾಟಲು ಹೆಣಗಾಡುತ್ತಿದ್ದಾರೆ. ಟೂರ್ನಿಯಲ್ಲಿ ಅವರಿಂದ ಈವರೆಗೆ ಒಂದು ಅರ್ಧಶತಕವೂ ಮೂಡಿಬಂದಿಲ್ಲ.
ಒಟ್ಟಾರೆಯಾಗಿ, ಟಿ20 ಕ್ರಿಕೆಟ್‌ನ ನಂಬರ್ 1 ಬ್ಯಾಟರ್‌ಗಳೆನಿಸಿಕೊಂಡಿದ್ದ ಈ ಜೋಡಿ, ಆಸೀಸ್ ನೆಲದಲ್ಲಿ ವೇಗವಾಗಿ ರನ್ ಗಳಿಸುವ ಕಲೆ ಮರೆತಂತೆ ಭಾಸವಾಗುತ್ತಿದೆ.

