ಮನೆ ನವೀಕರಣಕ್ಕೆ ಬರೋಬ್ಬರಿ ₹ 45 ಕೋಟಿ ಖರ್ಚು ಮಾಡಿದ್ರಾ ದೆಹಲಿ ಸಿಎಂ ಕೇಜ್ರಿವಾಲ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ನಿವಾಸವನ್ನು ನವೀಕರಿಸಲು ಬರೋಬ್ಬರಿ ₹ 45 ಕೋಟಿಗೂ ಹೆಚ್ಚು ಖರ್ಚು ಮಾಡಿದ್ದಾರೆ ಎಂದು ಬಿಜೆಪಿ ಬುಧವಾರ ಆರೋಪಿಸಿದೆ.

ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಮಾತನಾಡಿದ್ದು, ಅಪ್‌ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್ ಅವರು ರಾಜಕೀಯಕ್ಕೆ ಪ್ರವೇಶಿಸಿದಾಗ ಪ್ರಾಮಾಣಿಕತೆ ಮತ್ತು ಸರಳತೆಯನ್ನು ಉತ್ತೇಜಿಸುವ ಭರವಸೆ ನೀಡುತ್ತಿದ್ರು. ಆದರೆ ಆ ಎಲ್ಲ ಭರವಸೆಗಳನ್ನು ಸುಳ್ಳು ಮಾಡಿ ಜನರಿಗೆ ದ್ರೋಹವೆಸಗಿದ್ದಾರೆ. ಐಷಾರಾಮಿ ಮತ್ತು ಸೌಕರ್ಯದ ದುರಾಸೆ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೆ ಈ ಸುದ್ದಿಯನ್ನು ಹತ್ತಿಕ್ಕಲು ಕೇಜ್ರಿವಾಲ್ ಮಾಧ್ಯಮ ಸಂಸ್ಥೆಗಳಿಗೆ ₹ 20 ರಿಂದ 50 ಕೋಟಿ ನೀಡಲು ಮುಂದಾಗಿದ್ದರು. ಆದರೆ, ಮಾಧ್ಯಮದವರು ಆಪ್‌ ಆಫರ್‌ ಅನ್ನು ತಿರಸ್ಕರಿಸಿದ್ದಾರೆ ಎಂದೂ ಸಂಬಿತ್‌ ಪಾತ್ರ ಆರೋಪ ಮಾಡಿದ್ದಾರೆ.

ದೆಹಲಿ ಸಿಎಂ ಕೇಜ್ರಿವಾಲ್ ಅವರ ನಿವಾಸಕ್ಕೆ ವಿಯೆಟ್ನಾಂನಿಂದ ದುಬಾರಿ ಅಮೃತಶಿಲೆ, ಪೂರ್ವ- ನಿರ್ಮಿತ ಮರದ ಗೋಡೆಗಳು ಮತ್ತು ಲಕ್ಷಾಂತರ ರೂಪಾಯಿ ವೆಚ್ಚದ ಕರ್ಟನ್‌ಗಳನ್ನು ಅಳವಡಿಸಲಾಗಿದೆ ಎಂದು ತೋರಿಸುವ ದಾಖಲೆಗಳನ್ನು ಅವರು ಉಲ್ಲೇಖಿಸಿದ್ದಾರೆ. ಒಂದು ಪರದೆಗೆ ಬರೋಬ್ಬರಿ ₹ 7.94 ಲಕ್ಷಕ್ಕೂ ಹೆಚ್ಚು ವೆಚ್ಚವಾಗಿದೆ ಎಂದೂ ಹೇಳಿದರು.
ಇದು ನಾಚಿಕೆಯಿಲ್ಲದ ರಾಜನ ಕಥೆ . ಕೇಜ್ರಿವಾಲ್‌ ಬೇರೆ ರಾಜಕಾರಣಿಗಳ ಆಡಂಬರದ ಮನೆಗಳ ಬಗ್ಗೆ ಮಾತನಾಡುತ್ತಿದ್ದರು. ಈಗ ಅವರೇನು ಮಾಡುತ್ತಿದ್ದಾರೆ ಎಂದೂ ಬಿಜೆಪಿ ವಕ್ತಾರ ತರಾಟೆಗೆ ತೆಗೆದುಕೊಂಡಿದ್ದಾರೆ.

ತಮ್ಮ ಹಿಂದಿನ ಭಾಷಣಗಳಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಅದ್ದೂರಿ ಖರ್ಚುಗಳನ್ನು ವಿರೋಧಿಸುತ್ತಿದ್ದರು. ರಾಜಕಾರಣಿಗಳು ಆಡಂಬರದ ಮನೆಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಸಾರ್ವಜನಿಕ ವೆಚ್ಚದಲ್ಲಿ ಇತರ ಸೌಲಭ್ಯಗಳನ್ನು ಆನಂದಿಸುತ್ತಿದ್ದಾರೆ ಎಂದು ಟೀಕಿಸಿದ್ದರು. ಅಲ್ಲದೆ, ತಾನು 4 – 5 ಕೋಣೆಗಳ ಮನೆಯಿಂದ ತೃಪ್ತನಾಗಿದ್ದೇನೆ ಮತ್ತು ದೊಡ್ಡ ಬಂಗೆಲೆ ಬೇಕಾಗಿಲ್ಲ ಎಂದೂ ದೆಹಲಿ ಸಿಎಂ ಹೇಳಿಕೊಂಡಿದ್ದರು.ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಅನುಮಾನಗಳನ್ನು ನಿವಾರಿಸಲು ಸುದ್ದಿಗೋಷ್ಠಿ ನಡೆಸುವಂತೆ ಅರವಿಂದ್‌ ಕೇಜ್ರಿವಾಲ್ ಅವರ ನಿವಾಸ ನವೀಕರಣದ ಕುರಿತು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ದೆಹಲಿ ಸಿಎಂ ಅವರನ್ನು ಸಂಬಿತ್‌ ಪಾತ್ರ ಕೇಳಿದರು. ಕೇಜ್ರಿವಾಲ್ ಈ ಆರೋಪಗಳಿಗೆ ತಕ್ಷಣ ಪ್ರತಿಕ್ರಿಯಿಸಲಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!