ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ (SIR) ವಿರೋಧಿಸಿ, ಇಂಡಿಯಾ ಮೈತ್ರಿಕೂಟ ಬೃಹತ್ ‘ಮತದಾನ ಅಧಿಕಾರ ಯಾತ್ರೆ’ ನಡೆಸುತ್ತಿದ್ದಾರೆ.
ಬಿಹಾರದ ಔರಂಗಾಬಾದ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ‘ಚುನಾವಣಾ ಆಯೋಗ ಬಿಜೆಪಿ ಜೊತೆ ಸೇರಿಕೊಂಡು ಜೀವಂತವಾಗಿರುವ ಮತದಾರರನ್ನು ಸತ್ತವರೆಂದು ಘೋಷಿಸುತ್ತಿದೆ’ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನಾನು ಇತ್ತೀಚಿಗೆ ಹೊಸದಿಲ್ಲಿಯ ನನ್ನ ಮನೆಯಲ್ಲಿ ಬಿಹಾರದ ಕೆಲವು ಮತದಾರರೊಂದಿಗೆ ಚಹಾ ಸೇವಿಸಿದೆ. ಚುನಾವಣಾ ಆಯೋಗದ ದಾಖಲೆಯ ಪ್ರಕಾರ ಅವರೆಲ್ಲರೂ ಸತ್ತಿದ್ದಾರೆ. ಹಾಗಿದ್ದರೆ ನಾನು ಸತ್ತ ಜನರೊಂದಿಗೆ ಕುಳಿತು ಚಹಾ ಸೇವಿಸಿದೆನಾ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಇಂಡಿಯಾ ಮೈತ್ರಿಕೂಟದ ನಾಯಕರು ಬಿಹಾರದಲ್ಲಿ ಮತ ಕಳ್ಳತನವನ್ನು ತಡೆಯುವ ನಿರ್ಧಾರ ಮಾಡಿದ್ದೇವೆ. ಚುನಾವಣಾ ಆಯೋಗವು ಜೀವಂತವಾಗಿರುವ ಜನರನ್ನು ಕೊಂದು ಹಾಕಿದೆ. ಜೀವಂತವಾಗಿರುವವರನ್ನು ಏಕೆ ಸತ್ತವರೆಂದು ಘೋಷಿಸಲಾಗುತ್ತಿದೆ ಎಂದು ಕೇಳಿದರೆ ಮೇಲಿನಿಂದ ಆದೇಶ ಬಂದಿದೆ ಎನ್ನುತ್ತಾರೆ. ಅಂದರೆ ಇವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆದೇಶ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮತದಾನ ಕೇಂದ್ರದಲ್ಲಿ ಸಿಸಿಟಿವಿ ಅಳವಡಿಕೆ ಕಾನೂನನ್ನು ಏಕೆ ಬದಲಾಯಿಸಲಾಗಿದೆ ಎಂಬುದಕ್ಕೆ ಚುನಾವಣಾ ಆಯೋಗ ಉತ್ತರ ಕೊಡಬೇಕು. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡವರ ಹಣವನ್ನು ಲೂಟಿ ಮಾಡಿ ಉದ್ಯಮಿಗಳ ಖಜಾನೆ ತುಂಬಿಸುತ್ತಿದೆ. ಈಗ ಚುನಾವಣಾ ಆಯೋಗದ ಜೊತೆಗೂಡಿ ಬಡವರಿ ಬಳಿ ಇದ್ದ ಮತದಾನದ ಏಕೈಕ ಅಧಿಕಾರವನ್ನೂ ಕಸಿದುಕೊಳ್ಳುತ್ತಿದೆ. ಮೊದಲು ಬಿಜೆಪಿ ಇದನ್ನು ಕದ್ದುಮುಚ್ಚಿ ಮಾಡುತ್ತಿತ್ತು. ಈಗ ಬಹಿರಂಗವಾಗಿ ಮಾಡುತ್ತಿದೆ ಎಂದು ಆರೋಪಿಸಿದರು.
ನಾನು ಮತಗಳ್ಳತನದ ಆರೋಪ ಮಾಡಿದರೆ, ಚುನಾವಣಾ ಆಯೋಗ ನನ್ನಿಂದ ಅಫಿಡವಿಟ್ ಕೇಳುತ್ತದೆ. ಆದರೆ ಅದೇ ಆರೋಪವನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಡಿದರೆ ಅವರಿಂದ ಅಫಿಡವಿಟ್ ಕೇಳುವುದಿಲ್ಲ. ಅಂದರೆ ಇದು ಬಿಜೆಪಿ ಮತ್ತು ಚುನಾವಣಾ ಆಯೋಗದ ಜಂಟಿ ಷಡ್ಯಂತ್ಯ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ ಎಂದು ರಾಹುಲ್ ಗಾಂಧಿ ಹರಿಹಾಯ್ದರು.