ಹೊಸದಿಗಂತ ವರದಿ ಬಳ್ಳಾರಿ:
ಜನಾರ್ಧನ ರೆಡ್ಡಿ, ಶ್ರೀರಾಮುಲು ಮಧ್ಯೆ ಯಾವುದೇ ಅಸಮಾಧಾನ, ಮುನಿಸು ಇಲ್ಲ, ಬಿರುಕು ಇಲ್ಲ, ಇದೊಂದು ಅಪಪ್ರಚಾರ, ಇದಕ್ಕೆ ಕಿವಿಗೊಡಬೇಡಿ, ಎಲ್ಲರೂ ಒಗ್ಗಟ್ಟಾಗಿದ್ದೇವೆ, ನಮ್ಮ ಎಲ್ಲ ಕಾರ್ಯಕರ್ತರ, ಮುಖಂಡರ, ಮತದಾರರ ಆಶ್ರೀವಾದದಿಂದ ಸಂಡೂರಿನಲ್ಲಿ ಅಭ್ಯರ್ಥಿ ಬಂಗಾರು ಹನುಮಂತು ದಾಖಲೆ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ, ಇದರಲ್ಲಿ ಅನುಮಾನವೇ ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯಿಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಂಡೂರು ಪಟ್ಟಣದ ಶಿವಲೀಲಾ ರೆಸಾರ್ಟ್ ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶ್ರೀರಾಮುಲು, ಜನಾರ್ಧನ್ ರೆಡ್ಡಿ ನಾನು ಸೇರಿದಂತೆ ಎಲ್ಲರೂ ಸೇರಿ ನಿನ್ನೆಯೇ ಮತಯಾಚನೆ ಮಾಡಿದ್ದೇವೆ, ಯಾವುದೇ ಅಸಮಾಧಾನವಿಲ್ಲ, ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿರುವ ಇತಿಹಾಸವಿಲ್ಲ, ಈ ಬಾರಿ ಮತದಾರರ ಆಶ್ರಿವಾದದಿಂದ ಕಮಲ ಅರಳಲಿದೆ, ಪ್ರಚಾರಕ್ಕೆ ತೆರಳಿದ ಎಲ್ಲ ಕಡೆಗಳಲ್ಲೂ ಜನರಿಂದ ಭವ್ಯ ಸ್ವಾಗತ ದೊರೆಯುತ್ತಿದೆ, ನಮ್ಮ ಕಾರ್ಯಕರ್ತರ ಶಕ್ತಿ, ಮತದಾರರ ಆಶ್ರೀವಾದದಿಂದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.
ಎದುರಾದ ಉಪ ಚುನಾವಣೆಯಲ್ಲಿ ಶಿಗ್ಗಾವಿ ಕ್ಷೇತ್ರದ ಅಭ್ಯರ್ಥಿ ಭರತ್ ಬೊಮ್ಮಾಯಿ, ಸಂಡೂರು ಅಭ್ಯರ್ಥಿ ಬಂಗಾರು ಹನುಮಂತು ಹಾಗೂ ಚೆನ್ನಪಟ್ಟಣ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ಖಚಿತ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರೋಧಿ ಅಲೆ, ಭ್ರಷ್ಟಾಚಾರ ಮಿತಿ ಮೀರಿದ್ದು, ಜನರು ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಲು ತುದಿಗಾಲ ಮೇಲೆ ನಿಂತಿದ್ದಾರೆ.
ಉಪ ಚುನಾವಣೆ ಬಳಿಕ ಕಾಂಗ್ರೆಸ್ ಸ್ಥಿತಿ ಅಯೋಮಯವಾಗಲಿದೆ, ಕಾದು ನೋಡಿ ಎಂದರು. ಅಕ್ರಮ ಗಣಿಗಾರಿಕೆ, ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಸಿಬಿಐ ಅಧಿಕಾರಿಗಳು ಬಂಧನ ಕುರಿತು ಉತ್ತರಿಸಿದ ಅವರು, ಪ್ರಕರಣ ನ್ಯಾಯಾಲಯ ವಿಚಾರಣೆ ಹಂತದಲ್ಲಿದೆ, ಈ ಕುರಿತು ನಾನೇನು ಹೆಚ್ಚು ಹೇಳೋಲ್ಲ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ, ಸುನಿಲ್ ಕುಮಾರ್, ಅಭ್ಯರ್ಥಿ ಬಂಗಾರು ಹನುಮಂತು, ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೊಕ, ಜಿ.ಟಿ.ಪಂಪಾಪತಿ, ಎಚ್.ಹನುಮಂತಪ್ಪ, ಉಸ್ತುವಾರಿ ನವೀನ್ ಕುಮಾರ್ ಇತರರಿದ್ದರು.